ಅನ್‍ಲೈನ್ ಕ್ಲಾಸ್- ಕೇರಳದ ನೆಟ್‍ವರ್ಕ್‍ಗಾಗಿ ಗಡಿಭಾಗದ ವಿದ್ಯಾರ್ಥಿಗಳು ಪರದಾಟ

Public TV
1 Min Read

ಮಡಿಕೇರಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಶಾಲಾ, ಕಾಲೇಜು ಆರಂಭವಾಗಿವೆ. ಆದರೆ ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಿರುವುದರಿಂದ ಕೊಡಗಿನಲ್ಲಿ ಇನ್ನೂ ಶಾಲೆಗಳು ಆರಂಭವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳನ್ನೇ ಅವಲಂಬಿಸಬೇಕಾಗಿದೆ. ಆನ್‍ಲೈನ್ ತರಗತಿಗೆ ನೆಟ್‍ವರ್ಕ್ ಸರಿಯಾಗಿ ಇಲ್ಲದಿರುವುದರಿಂದ ಕೊಡಗಿನ ಗಡಿಭಾಗದ ವಿದ್ಯಾರ್ಥಿಗಳು ನೆಟ್‍ವರ್ಕ್ ಗಾಗಿ ಕೊರೊನಾ ಸೋಂಕು ಹೆಚ್ಚಿರುವ ಪಕ್ಕದ ಕೇರಳವನ್ನು ಅವಲಂಬಿಸಬೇಕಾಗಿದೆ.

ಕೊಡಗು ಮತ್ತು ಕೇರಳ ಗಡಿಭಾಗದಲ್ಲಿರುವ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಬಿಎಸ್‍ಎನ್‍ಎಲ್ 2 ಬಿಟ್ಟರೆ ಯಾವುದೇ ನೆಟ್‍ವರ್ಕ್ ಇಲ್ಲ. ವಿದ್ಯುತ್ ಇಲ್ಲದಿದ್ದರೆ ಬಿಎಸ್‍ಎನ್‍ಎಲ್ 2 ಜಿ ನೆಟ್ವರ್ಕ್ ಕೂಡ ಇರುವುದಿಲ್ಲ. ಹೀಗಾಗಿ ನೆಟ್ವರ್ಕ್ ಅರಸಿ ನೂರಾರು ವಿದ್ಯಾರ್ಥಿಗಳು ಕರ್ನಾಟಕದ ಕರಿಕೆಯಿಂದ ಕೇರಳದ ಪಾಣತ್ತೂರಿಗೆ ಹೋಗಿ ಆನ್‍ಲೈನ್ ತರಗತಿ ಕೇಳಬೇಕಾಗಿದೆ.

ಕರಿಕೆಯಿಂದ ಕೇರಳಕ್ಕೆ ನಿತ್ಯ ಆಟೋ, ಬೈಕುಗಳನ್ನು ಏರಿ ಕೇರಳದ ಪಾಣತ್ತೂರಿಗೆ ಹೋಗಬೇಕಾದರೆ ಆರ್ ಟಿಪಿಸಿಆರ್ ಆರ್ ನೆಗೆಟಿವ್ ವರದಿ ಬೇಕಾಗಿದೆ. ಬೆಳಗ್ಗೆ ಕೇರಳದ ಪಾಣತ್ತೂರಿಗೆ ಹೋಗಿ ಆನ್‍ಲೈನ್ ತರಗತಿ ಮುಗಿಸಿ ವಾಪಸ್ ಬರಬೇಕಾದರೆ ಇತ್ತ ಕರ್ನಾಟಕದ ಪೊಲೀಸರು ಕೂಡ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲವೆಂದು ಕರ್ನಾಟಕಕ್ಕೆ ಬಿಡುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ವಿದ್ಯಾರ್ಥಿಗಳನ್ನು ಕೇರಳಕ್ಕೆ ಕರೆದೊಯ್ಯಲು ಪ್ರತಿ ವಿದ್ಯಾರ್ಥಿಯೊಂದಿಗೆ ಪೋಷಕರು ಕೂಡ ಜೊತೆಯಲ್ಲೇ ಹೋಗಬೇಕಾಗಿದ್ದು, ಕೂಲಿ ಮಾಡಿ ಬದುಕುವ ಕುಟುಂಬಗಳು ಕೆಲಸವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ವರ್ಷಗಳಿಂದಲೂ ನೆಟ್ವರ್ಕ್ ಸಮಸ್ಯೆ ತೀವ್ರವಾಗಿರುವುದನ್ನು ಜಿಲ್ಲಾಧಿಕಾರಿ ಮತ್ತು ಸಚಿವರ ಗಮನಕ್ಕೆ ತರಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಸ್ಥಳೀಯರ ಅಸಮಾಧಾನವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *