– ಲೆಬನಾನ್ ಮೇಲಿನ ದಾಳಿ ಕಡಿಮೆ ಮಾಡಿ; ನೆತನ್ಯಾಹುಗೆ ಟ್ರಂಪ್ ಒತ್ತಾಯ
– ಕದನ ವಿರಾಮ ವಿಸ್ತರಿಸಲು ರಷ್ಯಾದಿಂದಲೂ ಒತ್ತಾಯ
ಜೆರುಸಲೇಂ: ಲೆಬನಾನ್ ಮೇಲಿನ ಇಸ್ರೇಲ್ ಮಿಸೈಲ್ ದಾಳಿಗೆ (Missile Strike) ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಲೆಬನಾನ್ ಜೊತೆಗೆ ನೇರ ಮಾತುಕತೆ ಆರಂಭಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಸಂಪುಟಕ್ಕೆ ಆದೇಶಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೌದು. ಒಂದು ಕಡೆ ಅಮೆರಿಕ – ಇರಾನ್ ಕದನ ವಿರಾಮ (US Israel Iran Ceasefire) ಘೋಷಿಸಿ ಮಾತುಕತೆಗೆ ಸಿದ್ಧವಾಗಿವೆ. ಈ ಮಾತುಕತೆಗೆ ಒಪ್ಪಿಗೆ ಸೂಚಿಸಿರುವ ಇಸ್ರೇಲ್ ಈ ನಡುವೆ ಲೆಬನಾನ್ ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ. ಈ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿ ಸ್ಥಾಪನೆಯಾಗಬಹುದಾದ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆ ಇದ್ದು ಲೆಬನಾನ್ ಅನ್ನು ಕದನ ವಿರಾಮದ ಭಾಗಿವಾಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದೆ. ಈ ಬೆನ್ನಲ್ಲೇ ನೇರ ಮಾತುಕತೆಗೆ ಇಸ್ರೇಲ್ ತಯಾರಿ ನಡೆಸಿದೆ.
ಲೆಬನಾನ್ ದಾಳಿ ಕಡಿಮೆ ಮಾಡುವಂತೆ ಟ್ರಂಪ್ ಒತ್ತಾಯ
ಈ ನಡುವೆ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಲೆಬನಾನ್ನಲ್ಲಿ ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ. ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳಿಗೆ ಧಕ್ಕೆ ತರುವಂತಹ ಯಾವುದೇ ಉದ್ವಿಗ್ನತೆಯನ್ನು ತಪ್ಪಿಸಲು ಟ್ರಂಪ್ ಸೂಚಿಸಿದ್ದಾರೆ. ಉಭಯ ನಾಯಕರ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಲೆಬನಾನ್ ಕದನ ವಿರಾಮ ಚೌಕಟ್ಟಿನ ಭಾಗವಲ್ಲ ಎಂದು ಮಾತನಾಡಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಲೆಬನಾನ್ ಜೊತೆ ಮಾತುಕತೆಗೆ ಸಿದ್ಧತೆ: ನೆತನ್ಯಾಹು
ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಲೆಬನಾನ್ ಪದೇ ಪದೇ ನೇರ ಮಾತುಕತೆಗಳನ್ನು ಬಯಸುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ. ನೇರ ಮಾತುಕತೆಗಾಗಿ ಲೆಬನಾನ್ ಪದೇ ಪದೇ ವಿನಂತಿಸಿದ ನಂತರ, ಸಾಧ್ಯವಾದಷ್ಟು ಬೇಗ ಲೆಬನಾನ್ ಜೊತೆ ಮಾತುಕತೆಗಳನ್ನು ಪ್ರಾರಂಭಿಸಲು ನಾನು ನಿನ್ನೆ ಕ್ಯಾಬಿನೆಟ್ಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು. ಈ ಚರ್ಚೆಗಳು ಹೆಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸುವುದು ಮತ್ತು ಎರಡು ರಾಷ್ಟ್ರಗಳ ನಡುವೆ ಶಾಂತಿಯುತ ಸಂಬಂಧಗಳತ್ತ ಸಾಗುವುದರ ಮೇಲೆ ಕೇಂದ್ರೀಕರಿಸುತ್ತವೆ ಎಂದು ಇಸ್ರೇಲಿ ನಾಯಕ ಹೇಳಿದರು.
ಕದನ ವಿರಾಮ ವಿಸ್ತರಿಸಲು ರಷ್ಯಾ ಒತ್ತಾಯ
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಈ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದ್ದರ ಇದರ ಬೆನ್ನಲೆ ಹಲವು ದೇಶಗಳ ಈ ಪ್ರಸ್ತಾಪಕ್ಕೆ ಬೆಂಬಲಿಸಿವೆ. ಅಮೆರಿಕ-ಇರಾನ್ ಕದನ ವಿರಾಮವನ್ನು ಲೆಬನಾನ್ಗೂ ವಿಸ್ತರಿಸಬೇಕು ಎಂದು ರಷ್ಯಾ ಒತ್ತಾಯಿಸಿದೆ, ನಡೆಯುತ್ತಿರುವ ಇಸ್ರೇಲಿ ದಾಳಿಗಳು ಮಾತುಕತೆಗಳನ್ನು ದುರ್ಬಲಗೊಳಿಸುವ ಅಪಾಯವನ್ನುಂಟುಮಾಡುತ್ತವೆ ಎಂದು ವಕ್ತಾರೆ ಮಾರಿಯಾ ಜಖರೋವಾ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಸ್ರೇಲ್ ಅನ್ನು ಟೀಕಿಸಿದ್ದಾರೆ. ಲೆಬನಾನ್ ವಿರುದ್ಧ ನಡೆಯುತ್ತಿರುವ ಆಕ್ರಮಣದಿಂದ ಮಾತುಕತೆ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಪ್ರಾದೇಶಿಕ ಶಾಂತಿಯನ್ನು ಉತ್ತೇಜಿಸಲು ಪಾಕಿಸ್ತಾನ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಷರೀಫ್ ಹೇಳಿದ್ದಾರೆ.



