ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ – ಪ್ರಮಾಣವಚನ ಸ್ವೀಕರಿಸಿದ ಸುಶೀಲಾ ಕರ್ಕಿ

Public TV
0 Min Read

ಕಠ್ಮಂಡು: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು.

ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಕರ್ಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸುಶೀಲಾ ಕರ್ಕಿ ಅವರ ಮಧ್ಯಂತರ ಸಂಪುಟದಲ್ಲಿ ಯಾವುದೇ ಸಚಿವರನ್ನು ಸೇರಿಸಿಕೊಳ್ಳಲಾಗಿಲ್ಲ.

ಅಧ್ಯಕ್ಷ ರಾಮ್ ಚಂದ್ರ ಪೌಡೆಲ್, ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಮತ್ತು ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ರಾಜೀನಾಮೆಗೆ ಕಾರಣವಾದ ಜನರೇಷನ್ ಝಡ್ ಪ್ರತಿಭಟನಾ ಚಳವಳಿಯ ಪ್ರತಿನಿಧಿಗಳ ನಡುವಿನ ಒಮ್ಮತದ ನಂತರ ಪ್ರಧಾನಿ ಸ್ಥಾನಕ್ಕೆ ಕರ್ಕಿ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.

ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಬೇಸತ್ತ ಯುವ ನೇಪಾಳಿಗಳು ನಡೆಸಿದ ಸಾಮೂಹಿಕ ಪ್ರತಿಭಟನೆಗಳ ನಂತರ ಈ ಬೆಳವಣಿಗೆಗಳು ನಡೆದವು. ಪ್ರತಿಭಟನೆಯಲ್ಲಿ 51 ಮಂದಿ ಮೃತಪಟ್ಟಿದ್ದಾರೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಪಿ.ಶರ್ಮಾ ಓಲಿ ಅವರನ್ನು ದೇಶ ತೊರೆಯುವಂತೆ ಒತ್ತಾಯ ಕೇಳಿಬಂದಿತ್ತು.

ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳ ಜನತೆ ಸಿಡಿದೆದ್ದು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಕಚೇರಿಗಳು, ಸಂಸತ್‌ ಭವನಕ್ಕೆ ನುಗ್ಗಿ ಧ್ವಂಸಗೊಳಿಸಿದರು. ಸಚಿವರನ್ನು ಹಿಡಿದು ಥಳಿಸಿದರು. ಪ್ರತಿಭಟನೆ ತೀವ್ರತೆ ಅರಿತು ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದರು. ಈಗ ನೇಪಾಳ ಹಿಂಸಾಚಾರವನ್ನು ಸೇನೆ ನಿಯಂತ್ರಣಕ್ಕೆ ತಂದಿದೆ.

ಮುಂದಿನ ಚುನಾವಣೆ ವರೆಗೆ ಉಸ್ತುವಾರಿ ಸರ್ಕಾರವನ್ನು ಮುನ್ನಡೆಸಲು ಕಾರ್ಕಿ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆದಿತ್ತು. ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಬಾಲೇಂದ್ರ ಅವರು ಹಂಗಾಮಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಲು ಉತ್ಸುಕರಾಗಿರಲಿಲ್ಲ. ಕರ್ಕಿ ಅವರ ಹೆಸರಿಗೆ ತಮ್ಮ ಬೆಂಬಲ ನೀಡಿದ್ದರು.

Share This Article