ಭಯೋತ್ಪಾದನೆ ವಿರುದ್ಧ ನಾವು ನಿಮ್ಮೊಂದಿಗೆ – ಭಾರತದ ಬೆಂಬಲಕ್ಕೆ ನಿಂತ ನೇಪಾಳ

Public TV
2 Min Read

– ಪಹಲ್ಗಾಮ್‌ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದ ನೇಪಾಳ ಪ್ರಜೆ

ಕಠ್ಮಂಡು: ಪಹಲ್ಗಾಮ್‌ ಭಯೋತ್ಪಾದಕ ದಾಳಿ (Pahalgam Terror Attack) ಬಳಿಕ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನತೆ ತಲೆದೋರಿರುವ ಹೊತ್ತಲ್ಲಿ ನೇಪಾಳ (Nepal) ಭಾರತಕ್ಕೆ (India) ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಏ.22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸುತ್ತಿದೆ. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿತು. ಪರಿಣಾಮ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಈ ಹೊತ್ತಿನಲ್ಲಿ ಭಾರತಕ್ಕೆ ನೇಪಾಳ ಒಗ್ಗಟ್ಟನ್ನು ಘೋಷಿಸಿದೆ. ಇದನ್ನೂ ಓದಿ: ಜಲಯುದ್ಧ – ಚೆನಾಬ್ ನದಿಯ 2 ಡ್ಯಾಂನಿಂದ ನೀರು ಬಿಟ್ಟು ಪಾಕ್‌ಗೆ ಶಾಕ್ ಕೊಟ್ಟ ಭಾರತ

ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ವಿದೇಶಾಂಗ ಸಚಿವಾಲಯ, ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ನೇಪಾಳ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ದಾಳಿಯಲ್ಲಿ ನೇಪಾಳಿ ಪ್ರಜೆ ಸೇರಿದಂತೆ 26 ಜನರು ಸಾವನ್ನಪ್ಪಿದ್ದರು. ಈ ದುರಂತದ ಸನ್ನಿವೇಶದಲ್ಲಿ ನೇಪಾಳ ಮತ್ತು ಭಾರತ ಒಗ್ಗಟ್ಟಿನಿಂದ ನಿಂತವು. ದುಃಖ ಮತ್ತು ಸಂಕಟ ಹಂಚಿಕೊಂಡು ಒಂದಾಗಿವೆ ಎಂದು ತಿಳಿಸಿದೆ.

ನೇಪಾಳವು ಭಯೋತ್ಪಾದನೆಯ ವಿರುದ್ಧದ ದೃಢ ನಿಲುವು ತಾಳಿದೆ. ಅನಾಗರಿಕ ಭಯೋತ್ಪಾದಕ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನೇಪಾಳ ಎಲ್ಲರೊಂದಿಗೂ ಒಟ್ಟಾಗಿ ನಿಲ್ಲುತ್ತದೆ. ಯಾವುದೇ ಶತ್ರು ಶಕ್ತಿಗಳು ತನ್ನ ನೆರೆಯ ರಾಷ್ಟ್ರಗಳ ವಿರುದ್ಧ ತನ್ನ ಮಣ್ಣನ್ನು ಬಳಸಲು ಅನುಮತಿಸುವುದಿಲ್ಲ ಎಂದು ನೇಪಾಳ ಸ್ಪಷ್ಟಪಡಿಸಿದೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಪಾಕ್‌ನ ಸಿನಿಮಾ, ಹಾಡು, ಪಾಡ್‌ಕಾಸ್ಟ್ ಸ್ಟ್ರೀಮಿಂಗ್ ನಿಲ್ಲಿಸಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಆದೇಶ

ಉದ್ವಿಗ್ನತೆಯನ್ನು ಕಡಿಮೆ ಮಾಡಲು ನೇಪಾಳ ಆಶಿಸುತ್ತಿದೆ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಗೆ ತನ್ನ ಬದ್ಧತೆಯನ್ನು ದೃಢಪಡಿಸುತ್ತದೆ ಎಂದು ಸಚಿವಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ.

Share This Article