ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

Public TV
3 Min Read

– ಅಧಿಕಾರದಿಂದ ಇಳಿದ 1 ದಿನದ ಬಳಿಕ ಓಲಿ ಮೊದಲ ಪ್ರತಿಕ್ರಿಯೆ
– ಪ್ರತಿಭಟನೆಯ ಹಿಂದೆ ಭಾರತದ ಕೈವಾಡದ ಬಗ್ಗೆ ಪರೋಕ್ಷ ಮಾತು

ಕಠ್ಮಂಡು: ಶ್ರೀರಾಮನನ್ನು (Rama) ವಿರೋಧಿಸಿ ಮಾತನಾಡಿದ್ದಕ್ಕೆ ನನ್ನ ಅಧಿಕಾರ ಹೋಯ್ತು ಎಂದು ನೇಪಾಳದ (Nepal) ಮಾಜಿ ಪ್ರಧಾನಿ ಕೆ.ಪಿ ಶರ್ಮಾ ಓಲಿ (KP Sharma Oli) ಹೇಳಿದ್ದಾರೆ. ಈ ಮೂಲಕ ನೇಪಾಳದ ಪ್ರತಿಭಟನೆಯ ಹಿಂದೆ ಭಾರತದ ಕೈವಾಡವಿದೆ ಎಂದು ಬಿಂಬಿಸುವ ಪ್ರಯತ್ನ ಆರಂಭಿಸಿದ್ದಾರೆ.

ಯುವಜನತೆಯ ಪ್ರತಿಭಟನೆಯ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಓಲಿ ಅವರು ಶಿವಪುರದಲ್ಲಿರುವ ಬ್ಯಾರಕ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಹಲವು ವಿಚಾರಗಳನ್ನು ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಸ್ವಭಾವತಃ ನಾನು ಸ್ವಲ್ಪ ಹಠಮಾರಿ. ಆ ಹಠಮಾರಿತನ ಇಲ್ಲದಿದ್ದರೆ ಬಹುಶಃ ಈ ಎಲ್ಲಾ ಸವಾಲುಗಳ ನಡುವೆ ನಾನು ಬಹಳ ಹಿಂದೆಯೇ ಅಧಿಕಾರವನ್ನು ಬಿಟ್ಟುಕೊಡುತ್ತಿದ್ದೆ. ಹಠಮಾರಿ ಧೋರಣೆಯಿಂದಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ದೇಶದ ನಿಯಮಗಳನ್ನು ಪಾಲಿಸಬೇಕು ಮತ್ತು ಸ್ಥಳೀಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದೆ.

ಈ ಹಿಂದೆ ಲಿಪುಲೇಖ್, ಕಲಾಪಾನಿ ಮತ್ತು ಲಿಂಪಿಯಾಧುರ ನೇಪಾಳಕ್ಕೆ ಸೇರಿವೆ ಎಂದು ನಾನು ಪ್ರತಿಪಾದಿಸಿದ್ದೆ. ಧರ್ಮಗ್ರಂಥಗಳು ಹೇಳುವಂತೆ ಭಗವಾನ್ ಶ್ರೀರಾಮ ಭಾರತದಲ್ಲಿ ಜನಿಸಿಲ್ಲ. ನೇಪಾಳದಲ್ಲಿ ಜನಿಸಿದನೆಂದು ನಾನು ಸಮರ್ಥಿಸಿಕೊಂಡಿದ್ದೆ. ಈ ನಿಲುವುಗಳಲ್ಲಿ ನಾನು ರಾಜಿ ಮಾಡಿಕೊಂಡಿದ್ದರೆ ನಾನು ಅನೇಕ ಸುಲಭ ಮಾರ್ಗಗಳನ್ನು ಆರಿಸಿಕೊಳ್ಳಬಹುದಿತ್ತು. ಲಿಂಪಿಯಾಧುರ ಸೇರಿದಂತೆ ನೇಪಾಳದ ನಕ್ಷೆಯನ್ನು ವಿಶ್ವಸಂಸ್ಥೆಗೆ ಕಳುಹಿಸದಿದ್ದರೆ ನನ್ನ ಜೀವನವು ತುಂಬಾ ವಿಭಿನ್ನವಾಗಿರುತ್ತಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

ಭಾರತ ವಿರೋಧಿ ಧೋರಣೆ:
ಚೀನಾ ಪರವಾಗಿದ್ದ ಕೆ.ಪಿ ಶರ್ಮಾ ಓಲಿ ಬಹಿರಂಗವಾಗಿಯೇ ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಅದರಲ್ಲೂ ರಾಮನ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

ರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ ಎಂದು ಭಾರತ ಹೇಳುತ್ತಿರುವ ಕಾರಣ ಸೀತೆ ರಾಜಕುಮಾರ ರಾಮನನ್ನು ವಿವಾಹವಾಗಿದ್ದಾಳೆ ಎಂದು ನಾವು ನಂಬಿದ್ದೇವೆ. ಆದರೆ ನಿಜವಾದ ಅಯೋಧ್ಯೆ ನೇಪಾಳದ ಬಿರ್‌ಗುಂಜ್‌ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿದೆ ಎಂದು ಹೊಸ ಕಥೆ ಕಟ್ಟಿದ್ದರು.

ಅಯೋಧ್ಯೆ ಹೆಸರಿನ ಗ್ರಾಮ ಬಿರ್‌ಗುಂಜ್‌ನಲ್ಲಿದೆ. ನಾವು ಸಾಂಸ್ಕೃತಿಕವಾಗಿ ಭಾರತದ ದಬ್ಬಾಳಿಕೆಗೆ ಒಳಗಾಗಿದ್ದೇವೆ. ವಾಲ್ಮೀಕಿ ಆಶ್ರಮ ನೇಪಾಳದಲ್ಲಿದಲ್ಲಿದೆ. ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದು ಇದೇ ರಿಧಿಯಲ್ಲಿ. ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವ ಸಂದರ್ಭದಲ್ಲಿ ರಾಮ ಸೀತೆಯನ್ನು ಮದುವೆಯಾಗಲು ಜನಕಪುರಿಗೆ ಬಂದಿದ್ದು ಹೇಗೆ? ಜನಕಪುರಿ ನೇಪಾಳದಲ್ಲಿರುವಾಗ ಭಾರತದಲ್ಲಿರುವ ಅಯೋಧ್ಯೆಯಿಂದ ರಾಮ ಜನಕಪುರಿಗೆ ಬರುವುದು ಅಸಾಧ್ಯ. ಫೋನ್‌ ಅಥವಾ ಮೊಬೈಲ್‌ ಇಲ್ಲದ ಆ ಸಮಯದಲ್ಲಿ ವಿವಾಹ ಮಾತುಕತೆ ಹೇಗೆ ನಡೆಯಿತು? ರಾಮನಿಗೆ ಜನಕಪುರಿ ಬಗ್ಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದರು.  ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

 

ಕೊರೊನಾ ವೈರಸ್‌ ಚೀನಾದಿಂದಲೇ ವಿಶ್ವಕ್ಕೆ ಹರಡಿದೆ ಎಂಬ ವಿಚಾರ ವಿಶ್ವಕ್ಕೆ ತಿಳಿದಿದ್ದರೂ ಒಲಿ ಭಾರತದಿಂದ ಕೋವಿಡ್‌ 19 ನೇಪಾಳಕ್ಕೆ ಬಂದಿದೆ ಎಂದು ದೂರಿದ್ದರು. ಇದಾದ ಬಳಿಕ ಭಾರತದ ಕಾಲಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶ ತನ್ನದು ಎಂದು ನೇಪಾಳ ಹೇಳಿತ್ತು. ಕೆಪಿ ಶರ್ಮಾ ಓಲಿ ಅವರ ಈ ನಿರ್ಧಾರ ಹಿಂದೆ ಚೀನಾ ಇದೆ ಎನ್ನುವುದು ಗೊತ್ತಿದ್ದರೂ ನೇಪಾಳದ ಹೊಸ ನಕ್ಷೆಯನ್ನು ಅಲ್ಲಿನ ಕ್ಯಾಬಿನೆಟ್ ಅನುಮೋದಿಸಿತ್ತು. ಈ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ಭಾರತ ಸರ್ಕಾರ ಹೇಳಿದ್ದರೂ ನೇಪಾಳ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ವಿವಾದಿತ ನಕ್ಷೆಯನ್ನು ಬಿಡುಗಡೆ ಮಾಡಿ ವಿಶ್ವಸಂಸ್ಥೆಗೆ ಕಳುಹಿಸಿತ್ತು.

ಮೊದಲಿನಿಂದಲೂ ನೇಪಾಳ ಜೊತೆ ಮಿತೃತ್ವ ಹೊಂದಿದ್ದ ಭಾರತದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪಕ್ಷದ ಸದಸ್ಯರೇ ನೇಪಾಳ ಹಾಗೂ ಭಾರತದ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಒಲಿ ನನ್ನ ವಿರುದ್ಧ ಭಾರತ ಷಡ್ಯಂತ್ರ ಮಾಡಿದೆ ಎಂದು ದೂರಿದ್ದರು.

Share This Article