– ನೇಪಾಳದ ವಲಸೆ ಕಾರ್ಮಿಕರ ಬದುಕಲ್ಲಿ ನಡೆದಿದ್ದೆಂಥಾ ದುರಂತ!
ನವದೆಹಲಿ: ‘ಅಪ್ಪಾ.. ನಾವು ಬದುಕುಳಿಯುವುದಿಲ್ಲ.. ಇಲ್ಲಿ ಬಹಳಷ್ಟು ನೀರು ತುಂಬಿದೆ’.. ಇದು ಸಾವಿಗೂ ಮುನ್ನ ಪುತ್ರ ತನ್ನ ತಂದೆ ಜೊತೆ ನಡೆಸಿದ ಕೊನೆ ಸಂಭಾಷಣೆ. ತುತ್ತಿನ ಚೀಲ ತುಂಬಿಸಲು ದೂರದ ಪ್ರದೇಶಗಳಿಂದ ಬಂದಿದ್ದ ಕಾರ್ಮಿಕ ದಂಪತಿ ಜೀವನದಲ್ಲಿ ನಡೆದ ದುರಂತ ಘೋರ.
ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarakashi Flood) ಸಂಭವಿಸಿದ ಮೇಘಸ್ಫೋಟದಿಂದ ಉಂಟಾಗಿ ಪ್ರವಾಹದಲ್ಲಿ ಮಗನನ್ನು ಕಳೆದುಕೊಂಡು ತಂದೆ ರೋಧಿಸಿದ್ದಾರೆ. ಸಾವಿಗೂ ಮುನ್ನ ಪುತ್ರ ತನ್ನ ಜೊತೆ ನಡೆಸಿದ ಸಂಭಾಷಣೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆ
ನೇಪಾಳದ ವಲಸೆ ಕಾರ್ಮಿಕರಾದ ಕಾಳಿ ದೇವಿ ಮತ್ತು ಆಕೆ ಪತಿ ವಿಜಯ್ ಸಿಂಗ್ ದುರಂತದಲ್ಲಿ ಪಾರಾಗಿ ಬದುಕುಳಿದ ದಂಪತಿಯಾಗಿದ್ದಾರೆ. ಭಟ್ವಾರಿ ಹೆಲಿಪ್ಯಾಡ್‌ನಲ್ಲಿ ಕುಳಿತಿದ್ದ ಸಿಂಗ್, ತನ್ನ ಮಗನೊಂದಿಗಿನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ. ಮಗನನ್ನು ಕಾಪಾಡಲು ಸಾಧ್ಯವಾಗದ, ಸಾಂತ್ವನ ಹೇಳಲಾಗದ ತಮ್ಮ ಅಸಹಾಯಕ ಸ್ಥಿತಿ ನೆನೆದು ಮರುಗಿದ್ದಾರೆ.
ಕಣಿವೆಯಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ನೇಪಾಳದಿಂದ ಆಗಮಿಸಿದ 26 ಜನರ ಗುಂಪಿನಲ್ಲಿ ಈ ಕಾರ್ಮಿಕನೂ ಇದ್ದ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುಮಾರು 47 ಕಿಲೋಮೀಟರ್ ದೂರದಲ್ಲಿರುವ ಭಟ್ವಾರಿಗೆ ತೆರಳಿದ್ದು ಈ ದಂಪತಿ ಮಾತ್ರ. ಒಂದು ದಿನದ ನಂತರ, ಉಳಿದ 24 ಸದಸ್ಯರಲ್ಲಿ ಯಾರನ್ನೂ ಸಂಪರ್ಕಿಸಲು ಇವರಿಂದ ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಕಂದಕಕ್ಕೆ ಬಿದ್ದ ಸಿಆರ್‌ಪಿಎಫ್ ವಾಹನ – ಮೂವರು ಹುತಾತ್ಮ, 16 ಮಂದಿಗೆ ಗಾಯ
‘ನಾವು ಕಣಿವೆಯನ್ನು ತೊರೆದಾಗ, ಈ ಪ್ರದೇಶಕ್ಕೆ ಇಂತಹ ವಿಪತ್ತು ಬರುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ. ಮುಂಬರುವ ಪ್ರವಾಹದ ಬಗ್ಗೆ ನನಗೆ ತಿಳಿದಿದ್ದರೆ, ನಾನು ನನ್ನ ಮಕ್ಕಳನ್ನು ಹಿಂದೆ ಬಿಡುತ್ತಿರಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ. ‘ನಮ್ಮನ್ನು ಹರ್ಸಿಲ್ ಕಣಿವೆಗೆ ಕರೆದೊಯ್ಯುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಮ್ಮ ಮಕ್ಕಳನ್ನು ನಾವೇ ಹುಡುಕುತ್ತೇವೆ’ ಎಂದು ಬೇಡಿಕೊಂಡಿದ್ದಾರೆ.
ಕಾರ್ಮಿಕರಲ್ಲದೆ, ಸೇನಾ ಸಿಬ್ಬಂದಿಯ ತಂಡವೂ ದುರಂತ ಸಂಭವಿಸಿದಾಗ ಕಣಿವೆಯಲ್ಲಿತ್ತು. ಸುಮಾರು 11 ಯೋಧರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಆಸ್ತಿಪಾಸ್ತಿ ಮತ್ತು ಜೀವ ಹಾನಿಯಾಗಿದೆ. ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಮಂಗಳವಾರ ಉತ್ತರಕಾಶಿಯ ಹರ್ಸಿಲ್ ಬಳಿಯ ಧರಾಲಿ ಗ್ರಾಮದಲ್ಲಿ ಭೀಕರ ದುರಂತ ಸಂಭವಿಸಿದ್ದು, ಭಾರೀ ಮೇಘಸ್ಫೋಟದಿಂದಾಗಿ ಮನೆಗಳು, ಮರಗಳು ನೆಲಕ್ಕೆ ಉರುಳಿ ಬಿದ್ದವು. ವಾಹನಗಳು ಕೊಚ್ಚಿ ಹೋದವು. ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.