ಕಠ್ಮಂಡು: ನೇಪಾಳ ಗೃಹ ಸಚಿವ ರಮೇಶ್ ಲೇಖಕ್ (Ramesh Lekhak) ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಫೇಸ್ಬುಕ್, ಎಕ್ಸ್, ಯೂಟ್ಯೂಬ್ ನಿಷೇಧಿಸಿರುವುದನ್ನು ವಿರೋಧಿಸಿ ನೇಪಾಳದಾದ್ಯಂತ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 19 ಮಂದಿ ಮೃತಪಟ್ಟಿದ್ದಾರೆ. ಪ್ರಕರಣದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಸ್ಥಾನಕ್ಕೆ ರಮೇಶ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಯೂಟ್ಯೂಬ್, ಎಕ್ಸ್ ನಿಷೇಧ – ಸರ್ಕಾರದ ವಿರುದ್ಧ ಸಿಡಿದೆದ್ದ ಜನರು; ಹಿಂಸಾಚಾರಕ್ಕೆ 9 ಬಲಿ
ಸೋಮವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಅವರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಮೇಲಿನ ಸರ್ಕಾರದ ನಿರ್ಬಂಧ ಮತ್ತು ಆಡಳಿತ ಸಮಸ್ಯೆಗಳ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು, ಕಠ್ಮಂಡು ಸೇರಿದಂತೆ ಅನೇಕ ನಗರಗಳಲ್ಲಿ ಮಾರಕವಾಗಿ ಪರಿಣಮಿಸಿವೆ.
ಇದಕ್ಕೂ ಮುನ್ನ, ಲೇಖಕ್ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳನ್ನು ನಿರ್ವಹಿಸಿದ ರೀತಿಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಸಾರ್ವಜನಿಕ ಮತ್ತು ರಾಜಕೀಯ ಟೀಕೆಗಳನ್ನು ಎದುರಿಸುತ್ತಿರುವ ಅವರು, ಇಂತಹ ದುರಂತದ ನಡುವೆಯೂ ಅಧಿಕಾರದಲ್ಲಿ ಮುಂದುವರಿಯುವುದು ಅನೈತಿಕ ಎಂದು ಅಭಿಪ್ರಾಯಪಟ್ಟಿದ್ದರು.