ಮನಮಿಡಿಯುವ ಮತ್ತೊಂದು ಹಾಡಿನ ಲಿರಿಕಲ್ ವೀಡಿಯೋ ರಿಲೀಸ್ ಮಾಡಿದ ‘ಕನ್ನೇರಿ’ ಚಿತ್ರತಂಡ

Public TV
2 Min Read

ನೆಲೆ ಇಲ್ಲದೇ ಊರೂರು ಸುತ್ತುವ, ನೆಲೆ ಇದ್ದರೂ ಉಳ್ಳವರ ದಬ್ಬಾಳಿಕೆಯಿಂದ ಬದುಕು ಕಂಡುಕೊಳ್ಳಲು ಸಾಧ್ಯವಾಗದೇ ಪಟ್ಟಣದತ್ತ ಬದುಕನರಸಿ ಬರುತ್ತಿರುವ ಅದೆಷ್ಟೋ ಸಂತ್ರಸ್ತರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಇಂತವರ ಕಷ್ಟ ಕಾರ್ಪಣ್ಯಗಳನ್ನು ತೋರಿಸುವ, ಸಾಮಾಜಿಕ ಕಳಕಳಿ ಮೆರೆಯುವ ಹಲವು ಸಿನಿಮಾಗಳು ತೆರೆಕಂಡಿವೆ, ಕಳಕಳಿ ಮೆರೆದಿವೆ ಇದೀಗ ಅಂತಹದ್ದೇ ಕಳಕಳಿ ಹೊತ್ತ ಸಿನಿಮಾವೊಂದನ್ನು ಇತ್ತೀಚೆಗೆ ನಡೆದ ಘಟನೆಯನ್ನಾಧರಿಸಿ ನಿರ್ದೇಶಕ ನೀನಾಸಂ ಮಂಜು ತೆರೆಗೆ ತರಲು ಸಿದ್ಧವಾಗಿದ್ದಾರೆ. ಅದುವೇ ಕನ್ನೇರಿ ಸಿನಿಮಾ.

ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಎಲ್ಲರಿಗೂ ನೆನಪಿದೆ. ಆ ಹೋರಾಟದ ಕಿಚ್ಚು ಆರುತ್ತಿದ್ದಂತೆ ಅಲ್ಲೇನಾಯ್ತು ಆ ಸಂತ್ರಸ್ತರಿಗೆ ನೆಲೆ ಇರಲು ಭೂಮಿ ಸಿಕ್ಕಿತೇ..? ಅಲ್ಲಿನ ಹೆಣ್ಣು ಮಕ್ಕಳ ಬದುಕೇನಾಯ್ತು ಎಂಬುದು ಯಾರಿಗೂ ತಿಳಿದಿಲ್ಲ..? ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕನ್ನೇರಿ ಎಂಬ ಕಥೆ ಹೆಣೆದು ಸಿನಿಮಾವಾಗಿಸಿದ್ದಾರೆ ನೀನಾಸಂ ಮಂಜು. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಕನ್ನೇರಿ ಸಿನಿಮಾ ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ. ಈಗಾಗಲೇ `ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡುಕಟ್ಟಿ’ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ಕನ್ನೇರಿ ಚಿತ್ರತಂಡ ‘ನೆಲೆ ಇರದ ಕಾಲು’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದೆ.

ಕಾಡಿನ ಮೂಲ ನಿವಾಸಿಗಳನ್ನು ನಿರ್ವಸತಿಗರನ್ನಾಗಿಸಿದ ಕಾಡ ಮಕ್ಕಳ ಒಡಲ ಬೇಗುದಿಯ ನೋವಿನ ಕಥೆ ಈ ಹಾಡಿನಲ್ಲಿದ್ದು ವಿ ರಘು ಶಾಸ್ತ್ರಿ ಸಂದರ್ಭಕ್ಕೆ ತಕ್ಕ ಹಾಗೆ ಅಧ್ಬುತ ಸಾಹಿತ್ಯ ಬರೆದಿದ್ದು, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ‘ನೆಲೆ ಇರದ ಕಾಲು’ ಹಾಡನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ‘ಕನ್ನೇರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅರುಣ್ ಸಾಗರ್, ಅನಿತ ಭಟ್, ಸರ್ದಾರ್ ಸತ್ಯ, ಎಂ.ಕೆ.ಮಠ್, ಕರಿಸುಬ್ಬು ತಾರಾಬಳಗದಲ್ಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *