ಪ್ರಧಾನಿ ಮೋದಿ ಜೊತೆಯ ಸಂವಾದಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿ ಆಯ್ಕೆ

Public TV
1 Min Read

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಹಾಗೂ ಪರೀಕ್ಷಾ ಭಯವನ್ನು ದೂರಗೊಳಿಸುವ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದಾನೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಗ್ರಾಮ ಭೈರನಾಯ್ಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ಯಶವಂತ್, ಈ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ಪರೀಕ್ಷೆಗಳ ಪ್ರಾಶಾಸ್ತ್ಯ ಮತ್ತು ಮಹತ್ವದ ಕುರಿತು ಯಶವಂತ ಬರೆದಿದ್ದ ಕನ್ನಡ ಪ್ರಬಂಧ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗುವಂತೆ ಮಾಡಿದೆ.

ಶಾಲೆಯ ವಿದ್ಯಾರ್ಥಿ ಕನ್ನಡದಲ್ಲಿ ಬರೆದಿದ್ದ ಪ್ರಬಂಧವನ್ನು ಶಾಲೆಯ ಮುಖ್ಯ ಶಿಕ್ಷಕರು ಇಂಗ್ಲಿಷ್‍ನಲ್ಲಿ ತರ್ಜುಮೆ ಮಾಡಿ ಕಳುಹಿಸಿದ್ದರು. ಒಟ್ಟಾರೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಯ ಪರಿಶ್ರಮದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ಪ್ರಧಾನಿಗಳ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ದೆಹಲಿಗೆ ತೆರಳಲು ಶಿಕ್ಷಕರು ಎಲ್ಲಾ ತಯಾರಿಯನ್ನು ನಡೆಸುತ್ತಿದ್ದಾರೆ.

ಯಶವಂತ್ ಕಡು ಬಡತನದ ಕುಟುಂಬದ ವಿದ್ಯಾರ್ಥಿ. ತಂದೆ ಡ್ರೈವಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಶಿಕ್ಷಕರ ಹಾಗೂ ಸಹಪಾಠಿಗಳ ಸಹಯೋಗದಿಂದ ಶಿಕ್ಷಣದ ಆಸಕ್ತಿಗೆ ಇಂದು ಒಂದು ದಾರಿ ಸಿಕ್ಕ ಆಗಿದೆ. ಈ ಖುಷಿಯಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯಶವಂತ್‍ಗೆ ಸನ್ಮಾನಿಸಿ ಗೌರವಿಸಿದರು.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯಶವಂತ್ ಸಂತಸವನ್ನು ವ್ಯಕ್ತಪಡಿಸಿ, ಈ ಪರಿಶ್ರಮಕ್ಕೆ ನನ್ನ ತಂದೆ-ತಾಯಿ, ಪರಿಶ್ರಮ, ಮುಖ್ಯವಾಗಿ ನನ್ನ ಮೆಚ್ಚಿನ ಗುರುಗಳು, ಹೀಗಾಗಿ ಪ್ರಧಾನಿಯವರ ಕಾರ್ಯಕ್ರಮ ಹಾಗೂ ಅವರನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿದೆ. ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *