ನೆಲಮಂಗಲ: ದೇಶದಲ್ಲಿ ಹೀಗಾಗಲೇ ಎನ್.ಆರ್.ಸಿ ಹಾಗೂ ಪೌರತ್ವದ ಕಿಚ್ಚು ಹೆಚ್ಚಾಗಿದ್ದು, ಇದೇ ವೇಳೆ ಅಕ್ರಮವಾಗಿ ನೆಲೆಸಿರುವ ವಲಸಿಗರ ಕೇಂದ್ರ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೊಂಡೆಕೊಪ್ಪ ಗ್ರಾಮದ ಬಳಿ ಸುಸಜ್ಜಿತವಾಗಿ ನಿರ್ಮಾಣವಾಗಿದೆ.
ನಿರ್ಮಾಣವಾಗಿರುವ ಹೊಸ ಕೇಂದ್ರಕ್ಕೆ ಆರು ಮಂದಿ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಈ ಕೇಂದ್ರದಲ್ಲಿ ಮೂರು ಕೊಠಡಿಗಳು, ಅಡುಗೆ ಗೃಹ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೈಫೈ ರೀತಿಯಲ್ಲಿ ಒದಗಿಸಲಾಗಿದೆ.
ಇಲ್ಲಿ ಬಂಧನಕ್ಕೆ ಒಳಗಾದವರಿಗೆ ಊಟ ಉಪಚಾರ ಬಿಸಿ ನೀರಿನ ವ್ಯವಸ್ಥೆ, ಸೋಲಾರ್, 24 ಗಂಟೆಗಳ ವಿದ್ಯುತ್ ನೀರಿನ ಸೌಕರ್ಯಗಳನ್ನು ಒದಗಿಸಲಾಗಿದೆ. ಇತ್ತ ಯಾವುದೇ ತೊಂದರೆಯಾಗದಂತೆ ಭದ್ರತೆ ದೃಷ್ಟಿಯಿಂದ ಕೇಂದ್ರದ ಸುತ್ತಲೂ ಎತ್ತರದ ಕಟ್ಟಡದ ಕಾಂಪೌಂಡ್ ಮತ್ತು ತಂತಿ ವ್ಯವಸ್ಥೆಯನ್ನು ಈ ಕೇಂದ್ರಕ್ಕೆ ನೀಡಿದ್ದು ಶೀಘ್ರದಲ್ಲೇ ಉದ್ಘಾಟನೆ ಕೂಡ ಆಗಲಿದೆ ಎನ್ನಲಾಗಿದೆ.
ಈ ಕೇಂದ್ರ ಹಿಂದೆ ವಿದ್ಯಾರ್ಥಿ ನಿಲಯವಾಗಿತ್ತು, ನಂತರದಲ್ಲಿ ಈ ಕಟ್ಟಡಕ್ಕೆ ಹೊಸ ವಿನ್ಯಾಸ ನೀಡಿದ್ದು ಉತ್ತಮ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಈ ಅಕ್ರಮ ಬಂಧನ ವಲಸಿಗರ ಕೇಂದ್ರ ಸೇರಿದೆ.