ನೆಲಮಂಗಲ: ಇತ್ತೀಚಿಗೆ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಕಾರ್ ಕುದಿಯುವ ಕಳ್ಳರು ಹೆಚ್ಚಾಗಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಸದಾಶಿವನಗರದಲ್ಲಿ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಡಿಸೈರ್ ಕಾರನ್ನ ಕದ್ದೊಯ್ದಿದ್ದಾರೆ.
ಮೊದಲೇ ಸ್ಕೆಚ್ ಹಾಕಿ ಕಾರಿನಲ್ಲಿ ಬಂದ ಈ ಖದೀಮರು ಮಂಜಪ್ಪ ಎಂಬವರ ಕಾರನ್ನು ಸಲೀಸಾಗಿ ಕದ್ದೊಯ್ದಿದ್ದಾರೆ. ಇನ್ನೂ ಕಾರ್ ಕಳ್ಳತನದ ದೃಶ್ಯ ಮನೆಯ ಮುಂಭಾಗದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದೆ.
ಡಿಸೆಂಬರ್ 18ರ ರಾತ್ರಿ ಸಹ ಇದೇ ಮಾದರಿಯಲ್ಲಿ ಕಾರ್ ಕಳ್ಳತನ ನಡೆದಿತ್ತು. ಚಾಣಾಕ್ಷತನದಿಂದ ಕಾರು ಕಳ್ಳತನ ಮಾಡಿದ ಖತರ್ನಾಕ್ ಕಳ್ಳರ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತಡರಾತ್ರಿ 2 ಗಂಟೆ ವೇಳೆಗೆ ಹಿಪ್ಪೆ ಆಂಜನೇಯ ಬಡಾವಣೆಯ 4ನೇ ಕ್ರಾಸ್‍ನ ನಿವಾಸಿ ದೀಪಕ್ ಅವರ ಮನೆ ಮುಂದೆ ನಿಲ್ಲಿಸಿದ್ದ 14 ಲಕ್ಷ ರೂ. ಮೌಲ್ಯದ ಕಾರನ್ನು ಕಳ್ಳರು ಕದ್ದಿದ್ದರು. ಇಲ್ಲಿಯೂ ಒಂದು ಕಾರಿನಲ್ಲಿ ಬಂದ ಕಳ್ಳರು ಕಾರ್ ಕದ್ದೊಯ್ದು ತಮ್ಮ ಕೈಚಳಕ ತೋರಿದ್ದರು. ಎರಡೂ ಕಳ್ಳತನಕ್ಕೆ ಸಾಮ್ಯತೆ ಕಂಡು ಬಂದಿದೆ.
ಪದೇಪದೇ ಇಂತಹ ಪ್ರಕರಣಗಳು ಸಂಭವಿಸುತಿದ್ದು ಪಟ್ಟಣದ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಪೊಲೀಸರು ಇಂತಹ ಕಳ್ಳತನದ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.