ಬೆಂಗಳೂರು | `ಎನ್‌ಸಿ ಕ್ಲಾಸಿಕ್‌’ನಲ್ಲಿ ನೀರಜ್‌ ಚೋಪ್ರಾಗೆ ಪ್ರಥಮ ಸ್ಥಾನ

Public TV
2 Min Read

– ಪದಕ ನೀಡಿ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಒಲಿಂಪಿಕ್ಸ್‌ ಪದಕ ವಿಜೇತ ಜಾವೆಲಿನ್ ಪಟು ನೀರಜ್ ಚೋಪ್ರಾ (Neeraj Chopra) ಬೆಂಗಳೂರಿನಲ್ಲಿ ನಡೆದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಜಾವೆಲಿನ್ ಟೂರ್ನಿ ಎನ್‌ಸಿ ಕ್ಲಾಸಿಕ್‌ನಲ್ಲಿ (Neeraj Chopra Classic 2025) ಮೊದಲ ಸ್ಥಾನ ಪಡೆದು ಮಿಂಚಿದ್ದಾರೆ.

ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧಾವಳಿಯಲ್ಲಿ ನೀರಜ್ ಚೋಪ್ರಾ 3ನೇ ಸುತ್ತಿನಲ್ಲಿ 86.18 ಮೀ.ದೂರ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕೀನ್ಯದ ಜುಲಿಯಸ್ ಯೆಗೊ (84.51 ಮೀ.) ಹಾಗೂ ಶ್ರೀಲಂಕಾದ ರುಮೇಶ್ ಪತಿರಾಜ್ ಗೆ (83.34 ಮೀ.) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು. ಭಾರತದ ಮತ್ತೋರ್ವ ಜಾವೆಲಿನ್‌ ಪಟು ಸಚಿನ್ ಯಾದವ್ 82.33 ಮೀಟರ್ ಗರಿಷ್ಠ ಎಸೆತದೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಈ ಕುರಿತು ಮಾತನಾಡಿದ ನೀರಜ್‌ ಚೋಪ್ರಾ, ಬೆಂಗಳೂರಿನಲ್ಲಿ ನನಗೆ ಉತ್ತಮ ಅನುಭವವಾಯಿತು. ನಾನು ಇನ್ನಷ್ಟು ದೂರ ಜಾವೆಲಿನ್ ಎಸೆಯಲು ಬಯಸಿದ್ದೆ. ಆದರೆ ಗಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಇದು ತುಂಬಾ ಕಠಿಣ ಸ್ಪರ್ಧಾವಳಿಯಾಗಿತ್ತು. ನಮಗೆ ಸಿಕ್ಕ ಬೆಂಬಲದಿಂದ ನನಗೆ ಖುಷಿಯಾಗಿದೆ ಎಂದು ಹೇಳಿದರು.

ಪದಕ ನೀಡಿ ಸನ್ಮಾನಿಸಿದ ಸಿಎಂ
ಇನ್ನೂ ಎನ್‌ಸಿ ಕ್ಲಾಸಿಕ್‌ನ ಚೊಚ್ಚಲ ಆವೃತ್ತಿ ಗೆದ್ದ ನೀರಜ್‌ ಚೋಪ್ರಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Neeraj Chopra) ಪದಕ ನೀಡಿ ಸನ್ಮಾನಿಸಿದ್ದಾರೆ. ಈ ಮಾಹಿತಿಯನ್ನು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ʻನೀರಜ್ ಚೋಪ್ರಾ ಕ್ಲಾಸಿಕ್- 2025ʼ ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ ಅವರ ಜೊತೆಯಾಗಿ ಪಾಲ್ಗೊಂಡು, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ ಪ್ರದರ್ಶನ ವೀಕ್ಷಿಸಿದೆ. 2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ. 1 ಜಾವಲಿನ್ ಪಟು ನೀರಜ್ ಚೋಪ್ರಾ ತಮ್ಮ ಹೆಸರಿನಲ್ಲಿ ಆಯೋಜಿಸಿದ್ದ ಈ ಅಂತಾರಾಷ್ಟ್ರೀಯ ಜಾವಲಿನ್ ಪಂದ್ಯಾಕೂಟದಲ್ಲಿ ಸ್ವತಃ ಅವರೇ ಚಾಂಪಿಯನ್ ಆಗಿ ಹೊರಹೊಮ್ಮಿದ ಕ್ಷಣಗಳಿಗೆ ನಾನು ಸಾಕ್ಷಿಯಾದದ್ದು ಹೆಚ್ಚು ಖುಷಿ ಕೊಟ್ಟಿತು. ನೀರಜ್ ಚೋಪ್ರಾ ಅವರಿಗೆ ಪದಕ ನೀಡಿ ಗೌರವಿಸಿ, ಮುಂದಿನ ಒಲಿಂಪಿಕ್‌ನಲ್ಲಿ ಮತ್ತೆ ಭಾರತದ ಕೀರ್ತಿಪತಾಕೆ ಹಾರಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಕರ್ನಾಟಕ ಒಲಿಂಪಿಕ್ಸ್‌ ಅಸೋಸಿಯೇಷನ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯರೂ ಆದ ಕೆ.ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.

Share This Article