ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ

Public TV
2 Min Read

ನ್ನಡ ಕಿರುತೆರೆ ವೀಕ್ಷಕರಿಗೆ ವಿಭಿನ್ನತೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ (Star Suvarna) ವಾಹಿನಿಯು ಇದೀಗ ನೀ ಇರಲು ಜೊತೆಯಲ್ಲಿ (Nee Iralu Jotheyalli) ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಮಾತಿನಲ್ಲಿ ತುಂಟತನವನ್ನೊಳಗೊಂಡ ಕಥಾನಾಯಕ ಕೃಷ್ಣನದ್ದು ಸ್ವಾತಂತ್ಯ ಹೋರಾಟಗಾರರ ಕುಟುಂಬ. ಕೆಲಸದಲ್ಲಿ ಜಾಣ್ಮೆ, ನಿಪುಣತೆ ಹೊಂದಿರುವ ಈತ, ತಂತ್ರದಲ್ಲಿ ಕಪಟಿಯಾಗಿದ್ದರೂ ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಅಧುನಿಕ ಯುಗದ ಶ್ರೀ ಕೃಷ್ಣ. ಆದರೆ ಈ ಕೃಷ್ಣನಿಗೆ ಪೂತನಿಯಂತೆ ಕಾಟ ಕೊಡೋಳು ಅತ್ತಿಗೆ ಊರ್ಮಿಳಾ ದಿವಾನ್. ನನ್ನದೇ ನಡಿಬೇಕು, ನನ್ನಿಂದಲೇ ಎಲ್ಲಾ ಎಂಬ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾ, ಅಹಂಕಾರವನ್ನೇ ಒಡವೆಯನ್ನಾಗಿಸಿಕೊಂಡು ಮನೆಮಂದಿಯನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿರ್ತಾಳೆ.

ಇನ್ನು ತಂದೆಯ ಮುದ್ದಿನ ಮಗಳು ಕಥಾನಾಯಕಿ ರಚನಾ ಪಟೇಲ್. ಓದಿನಲ್ಲಿ ಅತ್ಯಂತ ಪ್ರತಿಭಾವಂತೆ. ಯಾರನ್ನು ನೋಯಿಸದ ಮಾತೃ ಹೃದಯಿ. ಸೌಂದರ್ಯವನ್ನು ಮುಖದಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲಿಯೂ ಒಗ್ಗೂಡಿಸಿರುವ ಈಕೆಗೆ, ಸಾಧನೆಯ ಶಿಖರವೇರಿರುವ ಊರ್ಮಿಳಾ ದಿವಾನೇ ಆದರ್ಶ. ಆಕೆಯಂತೆ ಏನನ್ನಾದರೂ ಸಾಧಿಸಬೇಕೆಂಬ ಛಲ ರಚನಾಳದ್ದು. ಹೀಗೆ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾಗೆ ಮುಂದೆ ಕೃಷ್ಣ ತಕ್ಕ ಪಾಠ ಕಲಿಸ್ತಾನ? ತದ್ವಿರುದ್ಧ ಭಾವಗಳನ್ನು ಹೊಂದಿರುವ ಕೃಷ್ಣ,ರಚನಾ ಹೇಗೆ ಒಂದಾಗ್ತಾರೆ? ರಚನಾಗೆ ಆದರ್ಶವಾಗಿರೋ ಊರ್ಮಿಳಾ, ತನ್ನನ್ನೇ ಎದುರಾಳಿಯಾಗಿ ನೋಡಿದ್ರೆ ಮುಂದೇನಾಗಬಹುದು? ಎಂಬುದೇ ಮುಖ್ಯ ಕಥಾ ಹಂದರ. ಇದನ್ನೂ ಓದಿ: ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ

ಕನ್ನಡ ಕಿರುತೆರೆಯಲ್ಲಿ ಸುವರ್ಣ ಇತಿಹಾಸ ಬರೆದಿರೋ `ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ, ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್‌ಬ್ಯಾಕ್ ಆಗಿದ್ದು ಊರ್ಮಿಳಾ ದಿವಾನ್ ಎಂಬ ಮುಖ್ಯ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕನಾಗಿ ಪವನ್ ರವೀಂದ್ರ ಹಾಗೂ ನಾಯಕಿಯಾಗಿ ಸಲೋಮಿ ಡಿಸೋಜಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ನಟ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದ್ದಾರೆ.

ಮುದ್ದುಲಕ್ಷ್ಮಿ, ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಸೇರಿದಂತೆ ಇನ್ನೂ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿರುವ ಧರಣಿ ಜಿ.ರಮೇಶ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ನೀ ಇರಲು ಜೊತೆಯಲ್ಲಿ ಧಾರಾವಾಹಿ ಮೂಡಿ ಬರಲಿದೆ. ಈ ಧಾರಾವಾಹಿ ಇದೇ ಆಗಸ್ಟ್ 11ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Share This Article