– ಪಾಕ್ ಪ್ರಧಾನಿಗೆ ಮತ್ತೆ ಮುಖಭಂಗ; ಟ್ರಂಪ್‌ಗೆ ಪರೋಕ್ಷ ತಿರುಗೇಟು
ಲಂಡನ್: ಪಾಕಿಸ್ತಾನ ಭಯೋತ್ಪಾದನೆಯನ್ನು (Terrorism) ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಹರಡುತ್ತಿದೆ ಎಂದು ಭಾರತದ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ (Petal Gahlot) ಪಾಕ್ ಪ್ರಧಾನಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ (Shehbaz Sharif) ಭಾಷಣದ ನಂತರ ಪ್ರತ್ಯುತ್ತರ ನೀಡುವ ಹಕ್ಕು ಚಲಾಯಿಸುತ್ತಾ ಅವರು ಮಾತನಾಡಿದರು. ಪಾಕಿಸ್ತಾನ ಭಯೋತ್ಪಾದನೆಯನ್ನ ವೈಭವೀಕರಿಸುತ್ತಿದೆ. ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಬಿತ್ತರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಭಯೋತ್ಪಾದನೆ ವೈಭವೀಕರಣ
ನಾನು ಪ್ರಧಾನಿ ಷರೀಫ್ ಅವರ ಭಾಷಣ ಕೇಳಿದೆ. ಅವರು ಮತ್ತೊಮ್ಮೆ ತಮ್ಮ ವಿದೇಶಾಂಗ ನೀತಿಯ ಭಾಗವಾದ ಭಯೋತ್ಪಾದನೆಯನ್ನು ವೈಭವೀಕರಿಸಿದರು. ಆದ್ರೆ ಯಾವುದೇ ಸುಳ್ಳು, ನಾಟಕಗಳು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಕುಟುಕಿದರು. ಅಲ್ಲದೇ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯಾಕಾಂಡಕ್ಕೆ ಕಾರಣವಾದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಪಾಕಿಸ್ತಾನ ಸಮರ್ಥಿಸಿಕೊಂಡಿದೆ ಎಂಬುದನ್ನು ನೆನಪಿಸಿದ್ರು.
ಒಸಾಮಾ ಬಿಲ್ ಲಾಡೆನ್‌ಗೆ ವರ್ಷಗಳಿಂದ ಆಶ್ರಯ ನೀಡಿದ್ದ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ನಟಿಸಿದ ಅದೇ ಪಾಕಿಸ್ತಾನ ಇದಾಗಿದೆ. ಏಕೆಂದ್ರೆ ದಶಕಗಳಿಂದ ಭಯೋತ್ಪಾದನಾ ಶಿಬಿರಗಳನ್ನ ನಡೆಸುತ್ತಿದೆ ಎಂಬುದನ್ನು ಖುದ್ದು ಅಲ್ಲಿನ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಜ್ಞಾಪಿಸುತ್ತಾ ಪಾಕ್ ಪ್ರಧಾನಿಗೆ ಮುಖಭಂಗ ಮಾಡಿದರು.
ಧ್ವಂಸವಾದ ವಾಯುನೆಲೆ ತೋರಿಸಿ ಗೆಲುವು ಅಂದ್ರು
ಇನ್ನೂ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಪರಾಕ್ರಮ ನೆನಪಿಸಿದ ಪೆಟಲ್ ಗೆಹ್ಲೋಟ್, ಸಂಘರ್ಷದಲ್ಲಿ ಪಾಕಿಸ್ತಾನ ಗೆಲುವು ಎಂದು ಹೇಳಿಕೊಳ್ಳುತ್ತಿದೆ. ಭಾರತ ನಡೆಸಿದ ದಾಳಿಗೆ ಈಗಲೂ ಕುರುಹುಗಳಿವೆ, ಮೇ 9ರ ವರೆಗೆ ಪಾಕಿಸ್ತಾನವು ಭಾರತದ ಮೇಲೆ ಹೆಚ್ಚಿನ ದಾಳಿಗಳ ಬೆದರಿಕೆ ಹಾಕುತ್ತಿತ್ತು. ಆದರೆ ಮೇ 10 ರಂದು, ಅದರ ಸೇನೆಯು ಹೋರಾಟವನ್ನು ನಿಲ್ಲಿಸುವಂತೆ ನೇರವಾಗಿ ನಮ್ಮೊಂದಿಗೆ ಮನವಿ ಮಾಡಿತು. ಭಯೋತ್ಪಾದನೆಯನ್ನು ಹುಟ್ಟು ಹಾಕುವಲ್ಲಿ ಮತ್ತು ರಪ್ತು ಮಾಡುವಲ್ಲಿ ನಿರತವಾಗಿರುವ ಪಾಕಿಸ್ತಾನ ಅಸಂಬದ್ಧ ಹೇಳಿಕೆಗಳನ್ನ ನೀಡುತ್ತಿದೆ. ವಾಸ್ತವವಾಗಿ ಅದೆಲ್ಲವೂ ಭಾರತದ ದಾಳಿಯಿಂದ ಧ್ವಂಸವಾದ ವಾಯುನೆಲೆಗಳು ಹಾಗೂ ಸುಟ್ಟುಹೋದ ಹ್ಯಾಂಗರ್, ಹಾನಿಗೊಳಗಾದ ರನ್‌ವೇಗಳ ಚಿತ್ರಗಳಾಗಿವೆ. ಇದು ಸಾರ್ವಜನಿಕವಾಗಿಯೂ ಲಭ್ಯವಿದೆ. ಇದನ್ನ ಗೆಲುವು ಅಂತ ಹೇಳಿಕೊಳ್ಳೋದಕ್ಕೆ ನಾಚಿಕೆ ಆಗೋದಿಲ್ಲವೇ ಎಂದು ಜಾಡಿಸಿದರು.
ಟ್ರಂಪ್‌ಗೆ ಪರೋಕ್ಷವಾಗಿ ತಿರುಗೇಟು
ಭಾರತದಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನ ಕಾರಣವಾಗಿದೆ. ಜೊತೆಗೆ ಭಾರತ ತನ್ನ ಜನರನ್ನ ರಕ್ಷಿಸಿಕೊಳ್ಳೋದಕ್ಕೆ ಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತದೆ ಎಂಬುದೂ ಸತ್ಯ. ಇದರ ಹೊರತಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳನ್ನ ದ್ವಿಪಕ್ಷೀಯ ಮಟ್ಟದಲ್ಲೇ ಪರಿಹರಿಸಲಾಗುವುದು. ಇದರಲ್ಲಿ 3ನೇ ವ್ಯಕ್ತಿಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ಟ್ರಂಪ್ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ತಿರುಗೇಟು ನೀಡಿದರು.
ಮೇ ತಿಂಗಳಲ್ಲಿ ಭಾರತದೊಂದಿಗಿನ ಸಂಕ್ಷಿಪ್ತ ಮಿಲಿಟರಿ ಉಲ್ಬಣದಲ್ಲಿ ಪಾಕಿಸ್ತಾನವನ್ನು ವಿಜೇತ ಎಂದು ಬಿಂಬಿಸಲು ಷರೀಫ್ ತಮ್ಮ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣವನ್ನು ಬಳಸಿಕೊಂಡಿದ್ದರು. ನಾವು ಯುದ್ಧವನ್ನು ಗೆದ್ದಿದ್ದೇವೆ, ಮತ್ತು ಈಗ ನಾವು ನಮ್ಮ ಭಾಗದಲ್ಲಿ ಶಾಂತಿಯನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಪಾಕಿಸ್ತಾನವು ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಸಂಯೋಜಿತ, ಸಮಗ್ರ ಮತ್ತು ಫಲಿತಾಂಶ-ಆಧಾರಿತ ಸಂವಾದಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದರು.