ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡುವಂತೆ ಸುಪ್ರೀಂಗೆ ಮನವಿ

Public TV
1 Min Read

ನವದೆಹಲಿ: ದೀಪಾವಳಿ (Deepavali) ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಎನ್‌ಸಿಆರ್ (New Delhi) ಪ್ರದೇಶದಲ್ಲಿ ಹಸಿರು ಪಟಾಕಿ (Green Crackers) ಸಿಡಿಸಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ಗೆ (Supreme Court) ಮನವಿ ಮಾಡಲಾಗಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರ ಪೀಠಕ್ಕೆ ಮನವಿ ಮಾಡಿದರು.

ದೀಪಾವಳಿಯಂದು ರಾತ್ರಿ 8 ರಿಂದ 10 ರವರೆಗೆ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಬೇಕು. ಇದಕ್ಕಾಗಿ ನಾವು ಹಲವು ಷರತ್ತುಗಳನ್ನು ವಿಧಿಸಿದ್ದೇವೆ. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಅನುಮೋದಿಸಿದ ಹಸಿರು ಪಟಾಕಿಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡಬೇಕು ಎಂಬುದು ಸೇರಿದಂತೆ ಕೆಲವು ಷರತ್ತುಗಳ ಅಡಿಯಲ್ಲಿ ಪಟಾಕಿಗಳ ಬಳಕೆಗೆ ಅನುಮತಿಸಬಹುದು ಎಂದು ಮನವಿ ಮಾಡಿದರು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

ಪರವಾನಗಿ ಪಡೆದ ವ್ಯಾಪಾರಿಗಳ ಮೂಲಕವೇ ಮಾರಾಟ ನಡೆಯಬೇಕು. ಅವರು ಅನುಮತಿಸಲಾದ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಫ್ಲಿಪ್‌ಕಾರ್ಟ್, ಅಮೆಜಾನ್ ಸೇರಿದಂತೆ ಯಾವುದೇ ಇ-ಕಾಮರ್ಸ್ ವೆಬ್‌ಸೈಟ್ ಯಾವುದೇ ಆನ್‌ಲೈನ್ ಆರ್ಡರ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಮೆಹ್ತಾ ಹೇಳಿದರು.

ಇದೇ ವೇಳೆ ಕ್ರಿಸ್‌ಮಸ್ ಈವ್ ಮತ್ತು ಹೊಸ ವರ್ಷದ ಮುನ್ನಾದಿನ ರಾತ್ರಿ 11:55 ರಿಂದ 12:30 ರವರೆಗೆ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಬೇಕು ಎಂದು ಅವರು ಪ್ರಸ್ತಾಪಿಸಿದರು. ವಾದ ಆಲಿಸಿದ ಬಳಿಕ ಕೋರ್ಟ್ ಆದೇಶ ಕಾಯ್ದಿರಿಸಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಸಾವು ಕೇಸ್‌ – CBI ತನಿಖೆಗೆ ನೀಡಲು ಸುಪ್ರೀಂ ನಕಾರ

Share This Article