ನಟಿ ನಯನತಾರಾಗೆ (Nayanthara) ಡಾಕ್ಯುಮೆಂಟರಿ ವಿಚಾರದಲ್ಲಿ ಪದೇ ಪದೇ ನೋಟಿಸ್ (Legal Notice) ಜಾರಿ ಆಗುತ್ತಿದೆ. ನಯನತಾರಾ ಕುರಿತಂತೆ ನೆಟ್ ಫ್ಲಿಕ್ಸ್ ನಲ್ಲಿ ಡಾಕ್ಯುಮೆಂಟರಿ ಪ್ರಸಾರವಾಗುತ್ತಿದ್ದು, ಈ ಹಿಂದೆ ತಮ್ಮ ಸಿನಿಮಾದ ಕೆಲವು ದೃಶ್ಯಗಳನ್ನು ಈ ಡಾಕ್ಯುಮೆಂಟರಿಯಲ್ಲಿ ಬಳಸಲಾಗಿದೆ ಅಂತ ನಟ ಧನುಷ್ ನೋಟಿಸ್ ನೀಡಿದ್ದರು. ಐದು ಕೋಟಿ ರೂಪಾಯಿ ಪರಿಹಾರ ಕೂಡ ಕೇಳಿದ್ದರು. ಆ ಕೇಸ್ ಇನ್ನೂ ಕೋರ್ಟ್ ನಲ್ಲಿ ಇದೆ.
ಧನುಷ್ ನಿರ್ಮಾಣದಲ್ಲಿ ನಯನತಾರಾ ನಟನೆಯಲ್ಲಿ ಮೂಡಿ ಬಂದಿದ್ದ ನಾನುಂ ರೌಡಿ ದಾ ಸಿನಿಮಾದ ಕೆಲವು ದೃಶ್ಯಗಳನ್ನು ಡಾಕ್ಯುಮೆಂಟರಿಯಲ್ಲಿ ಅಳವಡಿಸಲಾಗಿತ್ತು. ಕಾಪಿರೈಟ್ ಉಲ್ಲಂಘನೆ ಆಗಿದೆ ಅನ್ನುವ ಕಾರಣಕ್ಕಾಗಿ ಧನುಷ್ ಸಂಸ್ಥೆ ಐದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತ ನೋಟಿಸ್ ಜಾರಿ ಮಾಡಿತ್ತು.
ಇದೀಗ ಅದೇ ಡಾಕ್ಯುಮೆಂಟರಿಗೆ ಸಂಬಂಧಿಸಿದಂತೆ ಮತ್ತೊಂದು ಸಿನಿಮಾ ಟೀಮ್ ನಿಂದ ನಯನತಾರಾಗೆ ನೋಟಿಸ್ ಕಳುಹಿಸಲಾಗಿದೆ. ಆಪ್ತಮಿತ್ರ ಸಿನಿಮಾದ ರಿಮೇಕ್ ಚಂದ್ರಮುಖಿ (Chandramukhi) ಸಿನಿಮಾದ ಕೆಲವು ದೃಶ್ಯಗಳನ್ನು ನಯನತಾರಾ ಅವರ ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳಲಾಗಿದೆ ಎನ್ನುವ ಕಾರಣಕ್ಕಾಗಿ ನಿರ್ಮಾಣ ಸಂಸ್ಥೆಯು ನೋಟಿಸ್ ಕೊಟ್ಟಿದೆ. ಐದು ಕೋಟಿ ರೂಪಾಯಿ ಪರಿಹಾರ ಕೊಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಧನುಷ್ ನೋಟಿಸ್ ಕಳುಹಿಸಿದ್ದಕ್ಕೆ ಕೆಂಡ ಕಾರಿದ್ದರು ನಯನತಾರಾ. ಸೋಷಿಯಲ್ ಮೀಡಿಯಾದಲ್ಲಿ ಧನುಷ್ ವ್ಯಕ್ತಿತ್ವದ ಕುರಿತು ಬರೆದುಕೊಂಡಿದ್ದರು. ಈಗ ಚಂದ್ರಮುಖಿ ಸಿನಿಮಾ ಟೀಮ್ ಕುರಿತು ಯಾವ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಾರೋ ಕಾದು ನೋಡಬೇಕು.