ನಯನತಾರಾ ನನ್ನ ಭಾವಿ ಮಕ್ಕಳ ತಾಯಿ ಎಂದ ವಿಘ್ನೇಶ್ ಶಿವನ್

Public TV
2 Min Read

ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಲವ್ ಸ್ಟೋರಿಗಳ ಮೂಲಕವೇ ಹೆಚ್ಚು ಸುದ್ದಿಯಾದವರು. ಆದರೆ ಯಾವುದಕ್ಕೂ ಜಗ್ಗದೇ ತಮ್ಮ ವೃತ್ತಿ ಬದುಕಿನತ್ತ ಚಿತ್ತ ಹರಿಸಿ ಯಶಸ್ವಿ ನಟಿಯಾಗಿ ಬೆಳೆದಿದ್ದಾರೆ. ಅದೇ ರೀತಿ ತಮ್ಮ ಹಿಂದಿನ ಲವ್ ಸ್ಟೋರಿಗಳನ್ನು ಮರೆತು ಇದೀಗ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದಾರೆ. ಹೀಗಿರುವಾಗಲೇ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ನಯನತಾರಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ಸೌತ್ ಸಿನಿರಂಗದಲ್ಲಿ ಅಧಿಕ ಸಂಭಾವನೆ ಪಡೆಯುವ ನಟಿ ಎಂದೂ ಹೇಳಲಾಗುತ್ತದೆ. ಹೀಗೆ ತಮ್ಮ ವಿಭಿನ್ನ ಹಾಗೂ ಹಿಟ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ವಿವಾದಗಳಿಗೂ ಹೊರತಾಗಿಲ್ಲ. ತಮ್ಮ ವೈಯಕ್ತಿಕ ಜೀವನದ ಕುರಿತು ಸಾಕಷ್ಟು ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ನಯನತಾರಾ ವೈಯುಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ತಮ್ಮ ಹಿಂದಿನ ಪ್ರೀತಿ ಪ್ರೇಮದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಡ್ಯಾನ್ಸರ್ ಪ್ರಭುದೇವ, ನಟ ಸಿಂಬು ಜೊತೆಗಿನ ಪ್ರೇಮ್ ಕಹಾನಿ ಬಗ್ಗೆ ನಯನತಾರಾ ಬಹಿರಂಗ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಭುದೇವ ಮಾಜಿ ಪತ್ನಿ ರಮ್ಲತ್ ನಮ್ಮ ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟಿದ್ದೇ ನಯನತಾರಾ ಎಂದು ಆರೋಪಿಸಿದ್ದರು. ಇವೆಲ್ಲದರ ನಡುವೆ ಇದೀಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕುರಿತು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ತಿಳಿದಿರುವ ವಿಚಾರ. ಶೀಘ್ರದಲ್ಲೇ ಈ ಜೋಡಿ ವಿವಾಹ ಸಹ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿಯೇ ತಮ್ಮ ಸಂಬಂಧವನ್ನು ಬಹಿರಂಗವಾಗಿ ಘೋಷಿಸಿದ್ದಾರೆ. ಅಲ್ಲದೆ ಇಬ್ಬರೂ ಜೊತೆಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದೀಗ ಈ ಜೋಡಿ ಕುರಿತು ಅಚ್ಚರಿ ಸುದ್ದಿಯೊಂದು ಹೊರ ಬಿದ್ದಿದ್ದು, ನಯನತಾರಾ ತಾಯಿಯಾಗುತ್ತಿದ್ದಾರಾ ಎಂಬ ಪ್ರಶ್ನೆ ಟಾಲಿವುಡ್‍ನಲ್ಲಿ ಹುಟ್ಟಿಕೊಂಡಿದೆ. ಈ ಕುರಿತು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಈ ಪ್ರಶ್ನೆಗೆ ಕಾರಣವಾಗಿದ್ದೇ ವಿಘ್ನೇಶ್ ಶಿವನ್ ಅವರು ತಾಯಂದಿರ ದಿನದಂದು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಫೋಟೋ. ಹೌದು ನಯನತಾರಾ ಮಗು ಎತ್ತಿಕೊಂಡಿರುವ ಫೋಟೋ ಹಾಕಿರುವ ವಿಘ್ನೇಶ್ ಶಿವನ್, ನನ್ನ ಭವಿಷ್ಯದ ಮಗುವಿನ ತಾಯಿಗೆ ತಾಯಂದಿರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಮದುವೆಗೂ ಮುಂಚೆ ನಯನತಾರಾ ಗರ್ಭಿಣಿಯಾಗಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದನ್ನು ಕಂಡ ನಯನತಾರಾ ಅಭಿಮಾನಿಗಳು ಆಶ್ಚರ್ಯಕ್ಕೊಳಗಾಗಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *