Chhattisgarh | ಭದ್ರತಾ ಸಿಬ್ಬಂದಿಯಿದ್ದ ವಾಹನ ಸ್ಫೋಟಿಸಿದ ನಕ್ಸಲರು – 9 ಮಂದಿ ದುರ್ಮರಣ

Public TV
1 Min Read

ರಾಯ್‌ಪುರ: ಭದ್ರತಾ ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು (Naxals) ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿ ಸ್ಫೋಟಿಸಿದ್ದಾರೆ (IED Blast). ಘಟನೆಯಲ್ಲಿ 8 ಮಂದಿ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಚಾಲಕ ಸೇರಿ 9 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಛತ್ತೀಸ್‌ಗಢದ (Chhattisgarh) ಬಿಜಾಪುರ ಜಿಲ್ಲೆಯ ಬೇದ್ರೆ-ಕುತ್ರು ರಸ್ತೆಯಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು ಐಇಡಿಯಿಂದ ಸ್ಫೋಟಿಸಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಛತ್ತಿಸ್‌ಗಢದ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಪಡೆ (Security Personnel) ಹಾಗೂ ಮಾವೋವಾದಿಗಳ (Maoists) ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದರು. ಇದನ್ನೂ ಓದಿ: ಭದ್ರತಾ ಪಡೆ ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿ – ಓರ್ವ ಸಿಬ್ಬಂದಿ ಸಾವು 

ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮಾದ್‌ನ ಕಾಡಿನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿಯಾಗಿದ್ದಾರೆ. ಅಲ್ಲದೇ ಜಿಲ್ಲಾ ಮೀಸಲು ಗಾರ್ಡ್‌ನ (DRG) ಹೆಡ್ ಕಾನ್ಸ್‌ಟೇಬಲ್ ಸನ್ನು ಕರಮ್ ತೀವ್ರಗಾಯಗೊಂಡು ಸಾವನ್ನಪ್ಪಿದ್ದರು. ಇದನ್ನೂ ಓದಿ: ಬೀಳ್ಕೊಡುಗೆ ಸಮಾರಂಭದ ವೇಳೆ ವಿದ್ಯಾರ್ಥಿಗಳಿಂದ ಗಾಳಿಯಲ್ಲಿ ಗುಂಡು – ಕೇಸ್‌ ದಾಖಲು

ಗುಂಡಿನ ದಾಳಿ ಬಳಿಕ ನಾಲ್ವರು ಮಾವೋವಾದಿಗಳ ಮೃತದೇಹ ಮತ್ತು ಎಕೆ -47 ರೈಫಲ್ ಮತ್ತು ಸ್ವಯಂ ಲೋಡಿಂಗ್ ರೈಫಲ್ (SLR) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಒಂದು ದಿನ ನಂತರ ನಕ್ಸಲರು ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share This Article