ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲರ ಕೈವಾಡ ಶಂಕೆ

Public TV
2 Min Read

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ನಕ್ಸಲರ ಕೈವಾಡವಿರುವ ಶಂಕೆ  ವ್ಯಕ್ತವಾಗಿದೆ.

ಗೌರಿ ಲಂಕೇಶ್ ಅವರು ರಾಜ್ಯ ನಕ್ಸಲರ ಶರಣಾಗತಿ ಸಮಿತಿಯ ಸದಸ್ಯೆಯಾಗಿದ್ದರು. ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ನಕ್ಸಲರಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಳೆದ 2 ವರ್ಷಗಳಿಂದ ನಕ್ಸಲರು ಹಗೆ ಇಟ್ಟುಕೊಂಡಿದ್ರು ಎಂಬ ಮಾಹಿತಿ ಇದೆ. ನಕ್ಸಲರ ಒಂದು ತಂಡ ಗೌರಿ ಲಂಕೇಶ್ ಮೇಲೆ ದ್ವೇಷ ಸಾಧಿಸುತ್ತಿತ್ತು ಎಂದು ಹೇಳಲಾಗಿದೆ. ಹೀಗಾಗಿ ನಕ್ಸಲರೇ ಗೌರಿ ಲಂಕೇಶ್‍ರನ್ನು ಟಾರ್ಗೆಟ್ ಮಾಡಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ಒಂದೂವರೆ ದಶಕದಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಕನ್ಯಾಕುಮಾರಿ ಹಾಗೂ ರಾಯಚೂರು ಮೂಲದ ಶಿವು ಮತ್ತು ಚಿನ್ನಮ್ಮ ಮೂರು ತಿಂಗಳ ಹಿಂದೆ ಶರಣಾಗಿ ಮುಖ್ಯವಾಹಿನಿಗೆ ಬರುವುದಾಗಿ ತಿಳಿಸಿದ್ದರು. ಹಿರಿಯ ವಕೀಲ ಎ.ಕೆ ಸುಬ್ಬಯ್ಯ, ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ರಚಿಸಿರೋ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ವೇದಿಕೆ ಮೂಲಕ ಈ ಮೂವರು ನಕ್ಸಲರು ಶರಣಾಗಿದ್ದರು.

ಇನ್ನು ಕೆಲವೇ ನಿಮಿಷಗಳಲ್ಲಿ ಗೌರಿ ಲಂಕೇಶ್ ಮರಣೋತ್ತರ ಪರೀಕ್ಷೆ ಮುಗಿಯಲಿದೆ. ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಪೋಸ್ಟ್ ಮಾರ್ಟಂ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ರಿಪೋರ್ಟ್ ಬರಲು 3 ರಿಂದ 4 ದಿನ ಆಗಲಿದೆ. ರಿಪೋರ್ಟ್ ಆಧರಿಸಿ ಮಹಾರಾಷ್ಟ್ರ ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಕಲ್ಬುರ್ಗಿ ಹತ್ಯೆಯ ಸಾಮತ್ಯೆಯ ಬಗ್ಗೆ ಪರಿಶೀಲನೆ ನಡೆಯಲಿದೆ. ದುಷ್ಕರ್ಮಿಗಳು 7 ಸುತ್ತು ಗುಂಡು ಹಾರಿಸಿದ್ದು, 3 ಗುಂಡುಗಳು ಗೌರಿ ಅವರ ಎದೆಭಾಗ ಹಾಗೂ 1 ಕಿಬ್ಬೊಟ್ಟೆ ಭಾಗಕ್ಕೆ ತಗುಲಿದೆ.

ಈಗಾಗಲೇ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯ ಒಳಗಡೆ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಗೌರಿ ಅವರ ಮೊಬೈಲ್ ಕರೆಗಳ ಬಗ್ಗೆ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಮೂರು ದಿನಗಳಿಂದ ಗೌರಿ ಅವರಿಗೆ ಎರಡು ನಂಬರ್ ಗಳಿಂದ ನಿರಂತರ ಮಿಸ್ ಕಾಲ್ ಬರುತ್ತಿತ್ತು ಹಾಗೂ ಕೆಲವೊಂದು ಬ್ಲಾಂಕ್ ಮೆಸೇಜ್ ಬರುತ್ತಿತ್ತು. ಆದ್ರೆ ಈ ಬಗ್ಗೆ ಗೌರಿ ಅವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಪ್ರತಿನಿತ್ಯ ಗೌರಿ ಲಂಕೇಶ್ ಅವರು ಕಾರಿಗೆ ಪೆಟ್ರೋಲ್ ಹಾಕಿಸಿತ್ತಿದ್ದ ಬಂಕ್ ಬಳಿ ಈ ಮೊಬೈಲ್ ನಂಬರ್ ಟ್ರೇಸ್ ಔಟ್ ಆಗಿದ್ದು, ಪ್ರಕರಣಕ್ಕೆ ಮಹತ್ವದ ಸುಳಿವು ಸಿಕ್ಕಂತಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಕೇವಲ ಒಬ್ಬ ವ್ಯಕ್ತಿಯ ಚಹರೆ ಮಾತ್ರ ಪತ್ತೆಯಾಗಿದೆ. ಆದ್ರೆ ಅದು ಅಸ್ಪಷ್ಟವಾಗಿದೆ. ಪೊಲೀಸರು ಗೌರಿ ಅವರ ಮನೆಯ ಒಂದು ವಾರದ ಸಿಸಿಟಿವಿ ದೃಶ್ಯಗಳನ್ನುಪರಿಶೀಲನೆ ಮಾಡುತ್ತಿದ್ದಾರೆ.

ಅರೋಪಿಗಳು ಬಳಕೆ ಮಾಡಿದ್ದ ಬೈಕ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ರಾತ್ರಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ಮಾಡಿದ್ದಾರೆ. ನಗರದಿಂದ ಹೊರ ಹೋಗುವ ರಸ್ತೆಗಳಲ್ಲಿ ಬೈಕ್‍ಗಳ ತಪಾಸಣೆ ಮಾಡಿದ್ದು, ಪ್ರಮುಖವಾಗಿ ಮೈಸೂರು ರಸ್ತೆ, ಹಾಗೂ ನೈಸ್ ರಸ್ತೆಯಲ್ಲಿ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಮೈಸೂರು ರಸ್ತೆ ಹಾಗೂ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಿಸಿಟಿವಿ ಪರಿಶೀಲನೆ ಕೂಡ ನಡೆಯುತ್ತಿದೆ. ಹಂತಕರು ಬೆಂಗಳೂರು ನಗರದಲ್ಲೆ ಉಳಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *