ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡ? ಅಜ್ಞಾತ ಸ್ಥಳದಲ್ಲಿ ನಡೆದ ಸಭೆಯಲ್ಲಿ ಏನು ಚರ್ಚೆ ನಡೆದಿತ್ತು?

Public TV
2 Min Read

ಬೆಂಗಳೂರು: ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‍ಐಟಿ)ಗೆ ಮಹತ್ವದ ಸುಳಿವೊಂದು ಲಭಿಸಿದೆ.

ಹೌದು. ಹತ್ಯೆಗೂ 3 ತಿಂಗಳ ಹಿಂದೆಯಷ್ಟೇ ಕರ್ನಾಟಕ ಹಾಗೂ ಆಂಧ್ರ ನಕ್ಸಲರ ಸಭೆಯೊಂದು ಅಜ್ಞಾತ ಸ್ಥಳದಲ್ಲಿ ನಡೆದಿತ್ತು. ಈ ಸಭೆಯಲ್ಲಿ ನಕ್ಸಲರನ್ನು ಸಮಾಜದ ಮುಖ್ಯವಾಹಿನಿ ಕರೆತರುವಲ್ಲಿ ಪ್ರಯತ್ನಿಸುತ್ತಿದ್ದ ಗೌರಿ ಲಂಕೇಶ್ ಭಾಗವಹಿಸಿದ್ದರು ಎನ್ನುವ ಮಾಹಿತಿ ಈಗ ಎಸ್‍ಐಟಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಏನಾಗಿತ್ತು?: ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ಕರೆತರುವ ಬಗ್ಗೆ ಸಭೆಯಲ್ಲಿ ಭಾರೀ ಚರ್ಚೆ ನಡೆದಿತ್ತು. ಈ ವೇಳೆ ಕೆಲವು ನಕ್ಸಲರು ಗೌರಿ ಲಂಕೇಶ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ ಗೌರಿ ಲಂಕೇಶ್ ಅವರ ಈ ನಡೆಯನ್ನು ನಕ್ಸಲರು ನೇರವಾಗಿ ಖಂಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ವಾದ-ವಿವಾದಗಳೇ ಏರ್ಪಟಿತ್ತು.

ಪ್ರತಿಯೊಬ್ಬ ಹೋರಾಟಗಾರನನ್ನು ಸಮಾಜದ ಮುಖ್ಯವಾಹಿನಿಗೆ ಕರೆದುಕೊಂಡು ಹೋಗಿ ನಮ್ಮ ಹೋರಾಟದ ತೀವ್ರತೆಯನ್ನು ಕುಗ್ಗಿಸುತ್ತಿದ್ದೀರಿ. ಅಲ್ಲಿ ನಕ್ಸಲರಿಗೆ ಬೇಕಾದ ಸೌಲಭ್ಯಗಳೂ ಸಿಗುತ್ತಿಲ್ಲ. ಅಲ್ಲದೇ ಅವರ ಮೇಲಿದ್ದ ಪ್ರಕರಣಗಳೇನೂ ರದ್ದಾಗುತ್ತಿಲ್ಲ. ಹೀಗಿರುವಾಗ ನಕ್ಸಲರನ್ನು ಮುಖ್ಯವಾಹಿನಿಗೆ ಕರೆದೊಯ್ದು ಏನು ಪ್ರಯೋಜನ ಎಂದು ಗೌರಿಗೆ ಪ್ರಶ್ನೆಗಳ ಸುರಿಮಳೆ ಕೇಳಿದ್ದರು. ಅಷ್ಟೇ ಅಲ್ಲದೇ ಇದರ ಪರಿಣಾಮವನ್ನು ಮುಂದೆ ನೀವೆ ಎದುರಿಸುತ್ತೀರಿ ಅನ್ನೋ ಮಾತು ಕೂಡ ಹೊರಬಿದ್ದಿದೆ ಅಂತ ಎಸ್‍ಐಟಿ ಮೂಲಗಳು ತಿಳಿಸಿವೆ.

ಹೀಗಾಗಿ ತನಿಖಾ ತಂಡಕ್ಕೆ ನಕ್ಸಲರ ಕಡೆ ಅನುಮಾನ ಹೆಚ್ಚಿದ್ದು, ಚಿಕ್ಕಮಗಳೂರು-ಆಂಧ್ರಕ್ಕೆ ತಂಡಗಳನ್ನು ನೇಮಿಸಿ ತನಿಖೆ ಮುಂದುವರಿಯುತ್ತಿದೆ. ಈ ಮೂರು ತನಿಖೆಯ ತಂಡದಿಂದಲೂ ಒಂದೇ ರೀತಿಯ ಮಾಹಿತಿ ದೊರೆತಿದೆ. ಹೀಗಾಗಿ ಹೆಚ್ಚಿನ ಮಾಹಿತಿಗಾಗಿ ಎಸ್‍ಐಟಿ ಕಲೆ ಹಾಕುತ್ತಿದೆ. ಕರ್ನಾಟಕ, ಮುಂಬಯಿ, ಬಿಹಾರ್, ಮಧ್ಯಪ್ರದೇಶ ಸಹಿತ ಇತರ ರಾಜ್ಯಗಳ ಜೈಲಿನಲ್ಲಿರುವ ಹಳೇ ಪ್ರಮುಖ ಕೈದಿಗಳ ವಿಚಾರಣೆಗೆ ಎಸ್‍ಐಟಿ ಮುಂದಾಗಿದೆ. ಅಲ್ಲದೇ ಈ ಸಂಬಂಧ ತಮಿಳುನಾಡಿನ ರಾಮೇಶ್ವರದಲ್ಲಿ ಕೂಡ ಒಂದು ತಂಡ ಬೀಡುಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಭೇಟಿಗೆ ದಿನ ನಿಗದಿ: ಈ ಹಿಂದೆ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸೇರಿದಂತೆ ಕೆಲ ನಕ್ಸಲರನ್ನು ಗೌರಿ ಲಂಕೇಶ್ ಮಧ್ಯಸ್ಥಿಕೆ ವಹಿಸಿ ಮುಖ್ಯವಾಹಿನಿಗೆ ಕರೆತಂದಿದ್ದರು. ಮತ್ತೆ ಕೆಲವರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಈ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಕೆಲ ನಕ್ಸಲರ ಮನವೊಲಿಸಿ ಅವರನ್ನು ಸಿಎಂ ಭೇಟಿಗೂ ದಿನಾಂಕ ನಿಗದಿ ಮಾಡಿಕೊಂಡಿದ್ದರು ಎಂಬುವುದಾಗಿ ತಿಳಿದುಬಂದಿದೆ.

ಸೆ.5ರ ರಾತ್ರಿ ಸುಮಾರು 7.45ರ ಸುಮಾರಿಗೆ ಮನೆಗೆ ವಾಪಾಸ್ಸಾಗುತ್ತಿದ್ದಂತೆಯೇ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಬ್ಬ ಗೌರಿ ಲಂಕೇಶ್ ಅವರ ಎದೆಗೆ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದನು. ಈ ಸುದ್ದಿ ದೇಶಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಘಟನೆಯ ಬಳಿಕ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಅನೇಕ ಪ್ರತಿಭಟನೆಗಳು ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *