Navratri 2025 Day 7: ದುಷ್ಟಶಕ್ತಿಗಳಿಂದ ಭಕ್ತರನ್ನು ಕಾಪಾಡುವ ಕಾಳರಾತ್ರಿ

Public TV
2 Min Read

ನವರಾತ್ರಿಯ 7ನೇ ದಿನ  ಚಾಮುಂಡೇಶ್ವರಿಯು ಕಾಳರಾತ್ರಿ ದೇವಿಯ ಅವತಾರ ತಾಳುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಏಳನೇ ದಿನ ದುರ್ಗಾದೇವಿಯ ಕಾಳರಾತ್ರಿ ಅವತಾರವನ್ನು ಪೂಜಿಸುತ್ತಾರೆ. ದುರ್ಗಾ ದೇವಿಯ ಈ ಕಾಳರಾತ್ರಿ ರೂಪವು ಮನುಷ್ಯನ ಜೀವನದಿಂದ ಕತ್ತಲೆ ಮತ್ತು ಭಯವನ್ನು ದೂರ ಮಾಡುತ್ತಾಳೆ. ಅಜ್ಞಾನವನ್ನು ನಾಶ ಮಾಡುವ, ಕೆಟ್ಟದರ ವಿರುದ್ಧ ವಿಜಯವನ್ನು ಸಂಕೇತಿಸುತ್ತಾಳೆ. ಅವಳು ತನ್ನ ಭಕ್ತರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತಾಳೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಅವರಿಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತಾಳೆ.

ಭಯಾನಕ ರೂಪ:
ತಾಯಿ ಕಾಳರಾತ್ರಿಯು ಕಾಳಿ ದೇವಿಯ ರೂಪವಾಗಿದ್ದಾಳೆ. ಈಕೆ 3 ಕಣ್ಣುಗಳನ್ನು ಹೊಂದಿದ್ದು, ಕತ್ತೆಯ ಮೇಲೆ ಕುಳಿತು ಸವಾರಿಯನ್ನು ಮಾಡುತ್ತಾಳೆ. ಕಾಳರಾತ್ರಿಯು ನಾಲ್ಕು ಕೈಗಳನ್ನು ಹೊಂದಿದ್ದು, ಬಲಗೈಯಲ್ಲಿ ವರ್ಮುದ್ರ ಮತ್ತು ಅಭಯಮುದ್ರ ಭಂಗಿಗಳಲ್ಲಿ, ಆಕೆ ಭಕ್ತರಿಗೆ ಆಶೀರ್ವಾದ ಮತ್ತು ರಕ್ಷಣೆಯನ್ನು ನೀಡುತ್ತಾಳೆ. ಎಡಗೈಯಲ್ಲಿ ಕಬ್ಬಿಣದ ಖಡ್ಗ ಮತ್ತು ಕತ್ತಿ ಹಿಡಿದಿದ್ದಾಳೆ. ಆದರೆ ಈ ಕಾಳರಾತ್ರಿ ಅವತಾರವನ್ನು ಆರಾಧಿಸಿದರೆ ಸಮೃದ್ಧಿ, ಅಭಿವೃದ್ಧಿ ದೊರೆಯುತ್ತದೆ.

ಕಪ್ಪು ಬಣ್ಣ ಮತ್ತು ನಿರ್ಭೀತ ನಡವಳಿಕೆಯೊಂದಿಗೆ ಕಾಳರಾತ್ರಿ ದೇವಿಯು ಭಯ ಮತ್ತು ನಕಾರಾತ್ಮಕತೆಯನ್ನು ತೊಡೆದುಹಾಕುವ ಶಕ್ತಿಯನ್ನು ಪ್ರತಿನಿಧಿಸುತ್ತಾಳೆ. ಅವಳನ್ನು ಪೂಜಿಸುವುದರಿಂದ ಭಕ್ತರನ್ನು ಹಾನಿಯಿಂದ ರಕ್ಷಿಸಿ, ಅಡೆತಡೆಗಳನ್ನು ತೆಗೆದುಹಾಕಿ  ಅವರಿಗೆ ಶಕ್ತಿ ಮತ್ತು ಧೈರ್ಯವನ್ನು ನೀಡುತ್ತಾಳೆ ಎನ್ನುವ ನಂಬಿಕೆಯಿದೆ.

ಪುರಾಣದ ಕಥೆ:
ದಂತಕಥೆಯ ಪ್ರಕಾರ, ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತಬೀಜಾಸುರ ಮೂರು ಲೋಕಗಳಲ್ಲಿ ತಮ್ಮ ಭಯವನ್ನು ಸೃಷ್ಟಿಸಲು ಮುಂದಾದರು. ಇದರಿಂದ ಆತಂಕಗೊಂಡ ದೇವತೆಗಳೆಲ್ಲ ಶಿವನ ಮೊರೆ ಹೋದರು. ರಾಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳಿದನು. ಶಿವನ ಸಲಹೆಯಂತೆ ಪಾರ್ವತಿಯು ದುರ್ಗೆಯ ರೂಪವನ್ನು ತೆಗೆದುಕೊಂಡು ಶುಂಭ-ನಿಶುಂಭರನ್ನು ಕೊಂದಳು. ಆದರೆ ದುರ್ಗಾ ದೇವಿಯು ರಕ್ತಬೀಜಾಸುರನನ್ನು ಕೊಂದ ತಕ್ಷಣ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಗಟ್ಟಲೆ ರಕ್ತಬೀಜಾಸುರರು ಉತ್ಪತ್ತಿಯಾದರು. ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿಯನ್ನು ರಚಿಸಿದಳು. ಇದಾದ ನಂತರ ದುರ್ಗಾ ದೇವಿಯು ರಕ್ತಬೀಜಾಸುರರನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ರಕ್ತಬೀಜಾಸುರನನ್ನು ಸೀಳಿ ಕೊಂದಳು.

ತುಂಬೆ ಹೂವುಗಳಿಂದ ಪೂಜೆ:
ಕಾಳರಾತ್ರಿ ದೇವಿಯು ಭಕ್ತರನ್ನು ದುಷ್ಟಶಕ್ತಿಗಳಿಂದ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಏಳನೇ ದಿನದಂದು ದೇವಿಯನ್ನು ತುಂಬೆ ಹೂವುಗಳಿಂದ ಪೂಜಿಸಲಾಗುತ್ತದೆ.

Share This Article