ಸಿಬ್ಬಂದಿ ಪಿಕಪ್, ಡ್ರಾಪ್‍ಗೆ ಬಳಕೆಯಾಗ್ತಿದೆ ನವಯುಗ ಟೋಲ್ ಅಂಬುಲೆನ್ಸ್!

Public TV
1 Min Read

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದ್ರೆ ಪ್ರಯಾಣಿಕರ ರಕ್ಷಣೆ, ಚಿಕಿತ್ಸೆ ಹಾಗೂ ಅಪಘಾತದ ಸ್ಥಳಕ್ಕೆ ತಕ್ಷಣ ಬರುವ ವಾಹನವೇ ಹೆದ್ದಾರಿ ಟೋಲ್ ಅಂಬುಲೆನ್ಸ್. ಆದರೆ ಈ ಅಂಬುಲೆನ್ಸ್ ವಾಹನದ ಮೂಲಕ ಟೋಲ್ ಸಿಬ್ಬಂದಿ ಪಿಕಪ್ ಡ್ರಾಪ್ ನಡೀತಿದೆ. ಬೆಳಗ್ಗಿನ ಪಾಳಯದಲ್ಲಿ ಕೆಲಸ ಮಾಡುವ ಟೋಲ್ ಸಿಬ್ಬಂದಿಯನ್ನು ಕಂಪನಿಗೆ ಕರೆ ತರೋದು, ಕೆಲಸ ಮುಗಿದ ಬಳಿಕ ಅವರನ್ನು ಮನೆಗೆ ಅಂಬುಲೆನ್ಸ್ ಮೂಲಕವೇ ಡ್ರಾಪ್ ನೀಡೋದು ನವಯುಗ ಟೋಲ್ ಕಂಪನಿಯ ಕಾಯಕವಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ರಸ್ತೆ ಅಂದ್ರೆ ಅದು ಅಪಘಾತದ ಕೇಂದ್ರ ಬಿಂದುವಿನಂತಿರುವ ಭಯಾನಕ ಹೆದ್ದಾರಿ ರಸ್ತೆ. ಈ ನೆಲಮಂಗಲ ಬೆಂಗಳೂರು ರಸ್ತೆಯಲ್ಲಿ ಅಪಘಾತವಾದ್ರೆ ವಾಹನ ಸವಾರರ ರಕ್ಷಣೆಗಾಗಿ ತುರ್ತು ಸೇವೆಗೆ ಬಳಸೋ ಟೋಲ್ ಅಂಬುಲೆನ್ಸ್ ಗಳು ದುರುಪಯೋಗವಾಗುತ್ತಿರುವ ಉದಾಹರಣೆ ಪಬ್ಲಿಕ್ ಟಿವಿಗೆ ಸಿಕ್ಕಿವೆ. ಅದು ನೆಲಮಂಗಲದ ನವಯುಗ ಟೋಲ್ ನಲ್ಲಿ ಅಂಬುಲೆನ್ಸ್ ಗಳು ಕೆಲಸ ಮಾಡುವ ಸಿಬ್ಬಂದಿಗೆ ಪಿಕಪ್ ಡ್ರಾಪ್ ಮಾಡುವ ವಾಹನವಾಗಿದೆ.

ಈ ನವಯುಗ ಟೋಲ್ ನೆಲಮಂಗಲದ ಬಳಿ ಟೋಲ್ ಪ್ಲಾಜಾ ಹಾಗೂ ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಪಾರ್ಲೆಜೀ ಬಳಿ ಟೋಲ್ ಪ್ಲಾಜಾವನ್ನ ನಿರ್ಮಿಸಿ 24 ಗಂಟೆಗಳ ಕಾರ್ಯದ ಮೂಲಕ ವಾಹನ ಸವಾರರಿಂದ ಟೋಲ್ ಹಣವನ್ನ ಸಂಗ್ರಹ ಮಾಡುತ್ತಿದೆ. ಆದರೆ ಹೆದ್ದಾರಿಯಲ್ಲಿ ಅಪಘಾತವಾದ್ರೆ ಸಮಯಕ್ಕೆ ಬರುತ್ತಾ ಟೋಲ್ ಅಂಬುಲೆನ್ಸ್ ಎನ್ನುವ ಪ್ರಶ್ನೆ ಸಾಕಷ್ಟು ಬಾರಿ ಎದುರಾಗಿದೆ. ಈ ಅಂಬ್ಯುಲೆನ್ಸ್ ನವಯುಗ ಟೋಲ್ ನಲ್ಲಿ ಹಗಲು ರಾತ್ರಿ ಶಿಫ್ಟ್ ಮುಗಿಸಿದ ಸಿಬ್ಬಂದಿಯನ್ನು ಮನೆಗೆ ಬಿಡೋದಕ್ಕೆ ಅಂಬುಲೆನ್ಸ್ ವಾಹನ ದುರ್ಬಳಕೆಯಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಎಷ್ಟೋ ಅಪಘಾತ ನಡೆದ ಸಂದರ್ಭದಲ್ಲಿ ಅಂಬುಲೆನ್ಸ್ ವಾಹನ ತಡವಾಗಿ ಬರಲು ಇದೇ ಕಾರಣವೆಂಬ ಸಾರ್ವಜನಿಕರ ಆರೋಪ ವ್ಯಕ್ತವಾಗುತ್ತದೆ. ಒಟ್ಟಾರೆ ಟೋಲ್ ರಸ್ತೆಯಲ್ಲಿ ಅಪಘಾತದ ತುರ್ತುಸ್ಥಿತಿಯಲ್ಲಿ ಬರುವ ಈ ಟೋಲ್ ಕಂಪನಿಯ ಅಂಬುಲೆನ್ಸ್ ಟೋಲ್ ಸಿಬ್ಬಂದಿ ಪ್ಯಾಸೆಂಜರ್ ವಾಹನವಾಗಿದೆ. ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *