ದುರ್ಗಾ ಪೂಜೆಯಂದು ರಜೆ ನೀಡಬಾರದು, ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಬಾರದು: ಬಾಂಗ್ಲಾ ಹಿಂದೂಗಳಿಗೆ ಎಚ್ಚರಿಕೆ

Public TV
1 Min Read

ಢಾಕಾ: ದುರ್ಗಾ ಪೂಜೆಯಂದು (Durga Puja) ಸಾರ್ವತ್ರಿಕ ರಜೆ (Holiday) ನೀಡಬಾರದು ಮತ್ತು ದುರ್ಗಾ ಮಾತೆಯ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ (Idol Immersion) ಮಾಡಬಾರದು ಎಂದು ಬಾಂಗ್ಲಾದಲ್ಲಿ ಹಿಂದೂಗಳಿಗೆ (Hindu) ಮುಸ್ಲಿಂ ಸಂಘಟನೆ ಬಹಿರಂಗ ಎಚ್ಚರಿಕೆ ನೀಡಿದೆ.

ಇನ್ಸಾಫ್ ಕೀಮ್ಕರಿ ಛತ್ರ-ಜನತಾ ಹೆಸರಿನ ಮುಸ್ಲಿಂ ಮೂಲಭೂತವಾಗಿ ಸಂಘಟನೆ ಢಾಕಾದಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದೆ. ರಸ್ತೆಗಳನ್ನು ಮುಚ್ಚುವ ಮೂಲಕ ಎಲ್ಲಿಯೂ ಪೂಜೆ ಮಾಡಬಾರದು. ವಿಗ್ರಹ ವಿಸರ್ಜನೆ ಮಾಡಿದರೆ ನೀರು (Water) ಮಲೀನವಾಗುತ್ತದೆ. ಹೀಗಾಗಿ ಯಾರೂ ದುರ್ಗಾ ಪೂಜೆಯನ್ನ ಆಚರಿಸಬಾರದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: 5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ

ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಶೇ.2ಕ್ಕಿಂತ ಕಡಿಮೆ ಇರುವ ಕಾರಣ ದುರ್ಗಾ ಪೂಜೆಯಂದು ಸಾರ್ವಜನಿಕ ರಜೆ ನೀಡಬಾರದು. ಇದರಿಂದ ಬಹು ಸಂಖ್ಯಾತರಾಗಿರುವ ಮುಸ್ಲಿಮರ ಜೀವನಕ್ಕೆ ಅಡ್ಡಿಯಾಗುತ್ತದೆ. ಧಾರ್ಮಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹಿಂದೂ ಹಬ್ಬಗಳಲ್ಲಿ ಯಾವುದೇ ಮುಸಲ್ಮಾನರು ಭಾಗಿಯಾಗಬಾರದು ಎಂದು ಸದಸ್ಯರು ಸೂಚಿಸಿದ್ದಾರೆ.

ಈ ಗುಂಪು 16 ಅಂಶಗಳ ಬೇಡಿಕೆಯನ್ನು ಸಹ ಮಂಡಿಸಿದೆ. ಹಿಂದೂಗಳು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ರಸ್ತೆಗಳನ್ನು ಮುಚ್ಚಬಾರದು. ಹಿಂದೂಗಳು ಆಟದ ಮೈದಾನದಲ್ಲಿ ದುರ್ಗಾ ಪೂಜೆ ಮಾಡಬಾರದು. ಬಾಂಗ್ಲಾದ ವಿಶೇಷ ಭೂಮಿಯಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳು ಅಕ್ರಮ. ಇವುಗಳನ್ನು ಕೆಡವಬೇಕು ಎಂದು ಆಗ್ರಹಿಸಿದೆ.

ಅಷ್ಟೇ ಅಲ್ಲದೇ ಭಾರತವು ಬಾಂಗ್ಲಾದೇಶದ ರಾಷ್ಟ್ರೀಯ ಶತ್ರುವಾಗಿರುವುದರಿಂದ ಬಾಂಗ್ಲಾದೇಶದ ಹಿಂದೂ ನಾಗರಿಕರೂ ಭಾರತ ವಿರೋಧಿಯಾಗಲು ಒಪ್ಪಿಕೊಳ್ಳಬೇಕು. ಹೀಗಾಗಿ ಭಾರತ ವಿರೋಧಿ ಬ್ಯಾನರ್ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ದೇವಸ್ಥಾನಗಳಲ್ಲಿ ಅಳವಡಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.

Share This Article