ಯುವ ಕ್ರೀಡಾಪಟುಗಳು ಮೇಜರ್ ಧ್ಯಾನ್ ಚಂದ್ ಅವರ ಕೆಚ್ಚನ್ನು ಬೆಳೆಸಿಕೊಳ್ಳಬೇಕು: ಡಾ. ನಾರಾಯಣಗೌಡ

Public TV
2 Min Read

ಬೆಂಗಳೂರು: ಮೇಜರ್ ಧ್ಯಾನ್ ಚಂದ್ ಅವರು ಕ್ರೀಡಾಪಟುಗಳಿಗೆ ಸ್ಪೂರ್ತಿ. ರಾತ್ರಿ ಚಂದ್ರನ ಬೆಳಕಿನಲ್ಲಿಯೂ ಕ್ರೀಡಾಭ್ಯಾಸ ಮಾಡುತ್ತಿದ್ದ ಕಾರಣ ಧ್ಯಾನ್ ಸಿಂಗ್ ಅವರು ಮುಂದೆ ಧ್ಯಾನ್ ಚಂದ್ ಎಂದೇ ಪ್ರಸಿದ್ಧಿಯಾದರು. ಅವರಂತೆ ಪ್ರತಿಯೊಬ್ಬ ಕ್ರೀಡಾಪಟುಗಳು ಶ್ರದ್ಧೆಯಿಂದ ಕ್ರೀಡಾಭ್ಯಾಸ ಮಾಡಬೇಕು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಭಿಪ್ರಾಯಪಟ್ಟರು.

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಸತತ ಮೂರು ಒಲಿಂಪಿಕ್ಸ್ ನಲ್ಲಿ ಪದಕ ಗಳಿಸಿದ ಭಾರತದ ಹಾಕಿ ತಂಡದ ಭಾಗವಾಗಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಖೇಲ್ ರತ್ನ ಪ್ರಶಸ್ತಿಯನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಕರಣ ಮಾಡಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಿಂದ ಪ್ರಶಸ್ತಿ ನೀಡುವ ಮೂಲಕ ಧ್ಯಾನ್ ಚಂದ್ ಅವರ ಸಾಧನೆಗೆ ಹೆಚ್ಚಿನ ಗೌರವ ನೀಡಿದೆ ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಅಲ್ಲ ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿ

ಬೆಂಗಳೂರಿನ ಅಕ್ಕಿತಿಮ್ಮಯ್ಯ ಹಾಕಿ ಕ್ರೀಡಾಂಗಣದಲ್ಲಿ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಚಿವರು, ಕ್ರೀಡೆಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಕೇಂದ್ರ ಸ್ಥಾಪಿಸುತ್ತಿದ್ದೇವೆ. ಪ್ರತಿ ತಾಲೂಕಿನಲ್ಲೂ ಕ್ರೀಡಾಂಗಣ ನಿರ್ಮಿಸುತ್ತಿದ್ದೇವೆ. ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸುತ್ತಿದ್ದೇವೆ. ಆ ಮೂಲಕ ಕ್ರೀಡೆಗೆ, ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತಿದ್ದೇವೆ. ಮುಂದಿನ ಒಲಿಂಪಿಕ್ಸ್‌ಗೆ ರಾಜ್ಯದಿಂದ 75 ಕ್ರೀಡಾಪಟುಗಳನ್ನು ಕಳುಹಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೆ ತಂದಿದ್ದೇವೆ. ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ಕ್ರೀಡೆಗೆ ಮೀಸಲಿಡುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಸಹ ಹಿಂದೆಂದೂ ನೀಡದಂತಹ ಪ್ರೋತ್ಸಾಹವನ್ನು ಕ್ರೀಡೆಗೆ ನೀಡುತ್ತಿದೆ. ಕ್ರೀಡಾಪಟುಗಳು ಸತತ ಅಭ್ಯಾಸ ನಡೆಸಿ, ಪದಕ ಗಳಿಸುವತ್ತ ಗಮನ ಹರಿಸಲಿ. ಎಲ್ಲಾ ರೀತಿಯ ಪ್ರೋತ್ಸಾಹ ಸರ್ಕಾರ ನೀಡುತ್ತದೆ ಎಂದು ಮಾಹಿತಿ ಹಂಚಿಕೊಂಡರು.

ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ಪ್ರಾಧಿಕಾರ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳು ಆಯೋಜಿಸಿದ ಕ್ರೀಡಾ ದಿನಾಚರಣೆಯಲ್ಲಿ ಸಚಿವರು ಪಾಲ್ಗೊಂಡರು. ವಿವಿಧ ವಯೋಮಾನದವರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಪದಕ ಪ್ರದಾನ ಮಾಡಿದರು. ಕ್ರೀಡಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯನ್ನು ಸಚಿವರು ಉದ್ಘಾಟಿಸಿದರು. ಇದೇ ವೇಳೆ ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾಗಿರುವ ಅಂಕಿತ ಅವರನ್ನು ಸನ್ಮಾನಿಸಲಾಯಿತು. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಬೆಲೆ ಕೇಳಿ ದಂಗಾದ ಅಭಿಮಾನಿಗಳು

ರಾಜ್ಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು, ಕ್ರೀಡಾ ಪ್ರಾಧಿಕಾರದ ಪ್ರಮುಖರು, ಕ್ರೀಡಾ ಇಲಾಖೆ ಆಯುಕ್ತ ವೆಂಕಟೇಶ್, ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರುಗುಂದೆ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *