ಅಪರಾಧದ ಆದಾಯದಿಂದ ಸೋನಿಯಾ, ರಾಹುಲ್‌ 142 ಕೋಟಿ ಲಾಭ ಪಡೆದಿದ್ದಾರೆ: ಇಡಿ

Public TV
2 Min Read

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿಗಳಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 142 ಕೋಟಿ ರೂ. ಅಪರಾಧದ ಆದಾಯವನ್ನು ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ಗಂಭೀರ ಆರೋಪ ಮಾಡಿದೆ.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಹೈಕೋರ್ಟ್‌ಗೆ ಇಡಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು ಇಂದು ವಿಚಾರಣೆ ನಡೆಯಿತು.

ಇಡಿಯನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, 2023 ರ ನವೆಂಬರ್‌ನಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ 751.9 ಕೋಟಿ ರೂ. ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಳ್ಳುವವರೆಗೆ ಆರೋಪಿಗಳು ಅಪರಾಧದ ಆದಾಯದಿಂದ ಲಾಭ ಪಡೆಯುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

ಅಪರಾಧದ ಆದಾಯವನ್ನು ಪಡೆದಾಗ ಗಾಂಧಿ ಕುಟುಂಬ ಹಣ ವರ್ಗಾವಣೆ ಮಾಡಿದ್ದು ಮಾತ್ರವಲ್ಲದೆ, ಆದಾಯವನ್ನು ಹಿಡಿದಿಟ್ಟುಕೊಳ್ಳುವ ಮೂಲಕವೂ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಹೇಳಿದೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ ಸದಸ್ಯರಿಗೆ 2 ತಿಂಗಳು ರಿಲೀಫ್‌

ವಿಚಾರಣೆ ವೇಳೆ ಪ್ರಕರಣದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರತಿಯನ್ನು ಸುಬ್ರಮಣಿಯನ್ ಸ್ವಾಮಿಗೆ ನೀಡಬೇಕೆಂದು ನ್ಯಾಯಾಧೀಶರು ಇಡಿಗೆ ತಿಳಿಸಿದರು. ಸುಬ್ರಮಣಿಯನ್‌ ಸ್ವಾಮಿ ಅವರು 2014 ರ ಜೂನ್‌ 26 ರಂದು ದೂರು ನೀಡಿದ್ದರು. ಇಡಿ 2021 ರಿಂದ ತನಿಖೆ ನಡೆಸಿ ಈ ವರ್ಷ ಆರೋಪ ಪಟ್ಟಿ ಸಲ್ಲಿಸಿತ್ತು.

ಏನಿದು ಪ್ರಕರಣ?
ಕ್ರಿಮಿನಲ್ ಪಿತೂರಿ ನಡೆಸಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್‌ ಪಿತ್ರೊಡಾ, ಸುಮನ್‌ ದುಬೆ ಮತ್ತು ಇತರ ಕಾಂಗ್ರೆಸ್ ನಾಯಕರು ಪಡೆದಿದ್ದಾರೆ.

ಯಂಗ್ ಇಂಡಿಯನ್‌ ಲಿಮಿಟೆಡ್‌ ಮೂಲಕ 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್‌ ಅವರು ಕೇವಲ 50 ಲಕ್ಷ ರೂ.ಗೆ ಖರೀದಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ ನೀಡಿದ್ದ 90.2 ಕೋಟಿ ರೂ. ಸಾಲವನ್ನು 9.02 ಕೋಟಿಯ ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಿ ಯಂಗ್‌ ಇಂಡಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

Share This Article