ಹಸುವಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಗೋಣದ ಪುಟ್ಟ ಬಾಲಕಿ ಆರತಿ ಶೇಟ್(9) ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ಮಕ್ಕಳ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.

2019ರಲ್ಲಿ ಕೇಂದ್ರ ಮಕ್ಕಳ ಕಲ್ಯಾಣ ಇಲಾಖೆ ಕೊಡುವ ಶೌರ್ಯ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದಿಂದ ಇಬ್ಬರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಾಲಕಿಯ ಎದೆಗಾರಿಕೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರೆತಿದೆ. ಬಾಲಕಿ ನವಿಲಗೋಣದ ಕಿರಣ್ ಪಾಂಡುರಂಗ ಶೇಟ್ ಪುತ್ರಿಯಾಗಿದ್ದು, ತನ್ನ ಧೈರ್ಯದಿಂದ ಇಡೀ ರಾಜ್ಯಕ್ಕೆ ಹೆಸರು ತರುವ ಜೊತೆ ಜಿಲ್ಲೆಗೂ ಹೆಸರು ತಂದಿರುವುದು ಹೆಮ್ಮೆಯ ವಿಷಯವಾಗಿದೆ.

ನಡೆದಿದ್ದೇನು?
2018ರ ಫೆ.13 ರಂದು ಬೆಳಗ್ಗೆ ಪುಟ್ಟ ತಮ್ಮನೊಂದಿಗೆ ಹೊನ್ನಾವರದ ನವಿಲಗೋಣದಲ್ಲಿರುವ ತನ್ನ ಮನೆಯ ಮುಂದೆ ಚಿಕ್ಕ ತಮ್ಮನನ್ನು ಸೈಕಲ್ ನಲ್ಲಿ ಕುಳ್ಳಿರಿಸಿ ಆರತಿ ಆಟವಾಡುತ್ತಿದ್ದಳು. ಈ ವೇಳೆ ಇವರ ಮನೆಯಲ್ಲೇ ಸಾಕಿದ್ದ ಹಸುವು ಏಕಾಏಕಿ ಬಾಲಕನ ಮೈಮೇಲೆ ಎಗರಿ ಬಂದಿತ್ತು.

ಹಸು ಬರುವುದನ್ನು ಗಮನಿಸಿದ ಪುಟ್ಟ ಬಾಲಕಿ ಅಂಜದೇ ತಮ್ಮನನ್ನು ಹಸುವಿನಿಂದ ರಕ್ಷಿಸಿದ್ದಳು. ಈ ಕುರಿತು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಕಟಿಸಿತ್ತು. ಅಲ್ಲದೇ ಬಾಲಕಿಯ ಧೈರ್ಯ ಸಾಹಸದ ವಿಡಿಯೋ ವೈರಲ್ ಆಗಿತ್ತು. ರಾಜ್ಯದ ಜನರು ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

2019ರ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿಗೆ ಒಟ್ಟು 22 ಮಕ್ಕಳು ಆಯ್ಕೆಯಾಗಿದ್ದಾರೆ. ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಮಕ್ಕಳು ಭಾಗವಹಿಸಲಿದ್ದಾರೆ. ಈ ಪ್ರಶಸ್ತಿ ಪದಕ, 1 ಲಕ್ಷ ರೂ. ನಗದು ಬಹುಮಾನ, 10 ಸಾವಿರ ಮೌಲ್ಯದ ಬುಕ್ ವೋಚರ್ ಹಾಗೂ ಪ್ರಮಾಣ ಪತ್ರವನ್ನು ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *