ಸಕ್ಕರೆ ನಾಡಿನ ಯುವ ವಿಜ್ಞಾನಿಗೆ ರಾಷ್ಟ್ರೀಯ ಪ್ರಶಸ್ತಿ

Public TV
2 Min Read

ಮಂಡ್ಯ: 2019 ನೇ ಸಾಲಿನ ಅನ್ವೇಷಣಾ ವಿಭಾಗದಲ್ಲಿ ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ಜಿಲ್ಲೆಯ ಶ್ರೀರಂಗಪಟ್ಟಣದ ಯುವ ವಿಜ್ಞಾನಿಗೆ ಲಭಿಸಿದೆ.

ಸಾಹಿತ್ಯ ದಂಪತಿಯಾದ ಆರೋಗ್ಯ ಇಲಾಖೆಯ ಅನಾರ್ಕಲಿ ಸಲೀಂ ಚಿಣ್ಯ ಮತ್ತು ಶಿಕ್ಷಣ ಇಲಾಖೆಯ ಡಾ. ಪರ್ವೀನ್ ಸಲೀಂ ಅವರ ಪುತ್ರ ಸಿ.ಎಸ್. ಮೊಹಮ್ಮದ್ ಸುಹೇಲ್ ಅವರಿಗೆ 2019 ನೇ ಸಾಲಿನ ಅನ್ವೇಷಣಾ ವಿಭಾಗದಲ್ಲಿ ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೇ ಅಮೆರಿಕದ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಎರಡನೇ ಬಾರಿಗೆ ಭಾರತ ಪ್ರತಿನಿಧಿಸುತ್ತಿರುವ ಯುವ ವಿಜ್ಞಾನಿ ಕೂಡ ಆಗಿದ್ದಾರೆ.

ನವದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇದೇ ಜನವರಿ 22 ರಂದು ಮಾನ್ಯ ರಾಷ್ಟ್ರಪತಿಗಳು ಮೊಹಮ್ಮದ್ ಸುಹೇಲ್ ಗೆ ಪ್ರಶಸ್ತಿ ಪ್ರಧಾನ ಮಾಡಿದರು. ಮೊದಲಿಗನಾಗಿ ಪ್ರಶಸ್ತಿ ಸ್ವೀಕರಿಸಿ ರಾಷ್ಟ್ರಪತಿಗಳ ಪ್ರಶಂಸೆಗೆ ಪಾತ್ರವಾದ ಸುಹೇಲ್‍ಗೆ ಒಂದು ಲಕ್ಷ ನಗದು, ಹತ್ತು ಸಾವಿರ ರೂ.ನ ಪುಸ್ತಕಗಳು, ಚಿನ್ನದ ಪದಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

ಎರಡು ಬಾರಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿರುವ ಸುಹೇಲ್, ಕ.ರಾ.ವಿ.ಪ ಮೂಲಕ ಎರಡು ಬಾರಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ವಿಜ್ಞಾನ ಸಮಾವೇಶದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಬಳಿಕ 25ಕ್ಕೂ ಹೆಚ್ಚು ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

2018ರ ಮೇ ಮಾಹೆಯಲ್ಲಿ ಅಮೆರಿಕಾದ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿ “ಅಪೌಷ್ಟಿಕತೆ”ಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನಾ ಪ್ರಬಂಧ ಮಂಡಿಸಿ ಎರಡನೇ ಗ್ರಾಂಡ್ ವಾರ್ಡ್ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ಸುಹೇಲ್ ಅವರ ಸಾಧನೆಗೆ ಅಮೆರಿಕದ ಪ್ರತಿಷ್ಠಿತ ಸಾಮ್ ವಿದ್ ಶಿಕ್ಷಣ ಸಂಸ್ಥೆಯು ಜಗದ್ವಿಖ್ಯಾತ ವಿಜ್ಞಾನಿ ದಿ. ಎ.ಪಿ.ಜೆ ಅಬ್ದುಲ್ ಕಲಾಂ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದೆ

ಸಿ.ಎಸ್ ಸುಹೇಲ್ ಹೆಸರನ್ನು ಮೈನರ್ ಪ್ಲಾನೆಟ್ ಗೆ ಇಡುವುದರ ಮೂಲಕ ದೇಶದ ಕೀರ್ತಿಯನ್ನು ಮುಗಿಲೆತ್ತರ ಏರಿಸಿರುವುದನ್ನು ಸ್ಮರಿಸಬಹುದಾಗಿದೆ. ರಾಜ್ಯ ಅಸಾಧಾರಣ ಪ್ರತಿಭಾ ಪ್ರಶಸ್ತಿ, ರಾಜ್ಯ ಬಾಲ ವಿಕಾಸ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು 18 ವರ್ಷ ತುಂಬುವ ಮೊದಲೇ ಮೊಹಮ್ನದ್ ಸುಹೇಲ್ ಪಡೆದಿದ್ದಾರೆ. ಈಗ 2019 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಸಕ್ಕರೆ ನಾಡು ಮಂಡ್ಯದ ಕೀರ್ತಿಯನ್ನು ಮತ್ತಷ್ಟು ಏರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *