ರಾಷ್ಟ್ರಗೀತೆಗೆ ಅವಮಾನ – ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ

3 Min Read

– ಸತ್ಯ ಮುಚ್ಚಿಟ್ಟು ಭಾಷಣದಲ್ಲಿ ಸುಳ್ಳು ಹೇಳಿಕೆ ದಾಖಲಿಸಲಾಗಿತ್ತು
– ರಾಜ್ಯಪಾಲರು ಹೊರ ನಡೆದಿದ್ದಕ್ಕೆ ಲೋಕಭವನ ಸ್ಪಷ್ಟನೆ

ಚೆನ್ನೈ: ರಾಜ್ಯಪಾಲರೇ ರಾಷ್ಟ್ರಗೀತೆಗೆ (National Anthem) ಅಪಮಾನ ಮಾಡಿರುವ ಘಟನೆ ತಮಿಳುನಾಡಿನ ವಿಧಾನ ಸಭೆಯಲ್ಲಿಂದು ನಡೆದಿದೆ. ತನಗೆ ಮಾತನಾಡೋಕೆ ಅವಕಾಶ ಕೊಟ್ಟಿಲ್ಲ ಅಂತ ರಾಜ್ಯಪಾಲ ಆರ್.ಎನ್.ರವಿ (Tamil Nadu Governor RN Ravi), ರಾಷ್ಟ್ರಗೀತೆ ನುಡಿಸುತ್ತಿದ್ದಾಗಲೇ ವಿಧಾನಸಭೆಯಿಂದ ಹೊರ ನಡೆದಿದ್ದಾರೆ.

ಹೌದು. ವಿಧಾನಸಭೆ (Assembly) ಅಧಿವೇಶನದ ಆರಂಭದಲ್ಲಿ ತಮಿಳುನಾಡಿನ ನಾಡಗೀತೆಯ ಜೊತೆಗೆ ರಾಷ್ಟ್ರಗೀತೆಯನ್ನು ನುಡಿಸಬೇಕೆಂದು ಹೇಳಲಾಯಿತು. ಇದರಿಂದ ಕೋಪಗೊಂಡ ರಾಜ್ಯಪಾಲರು ವಿಧಾನಸಭೆಯಿಂದ ಹೊರನಡೆದಿದ್ದಾರೆ. ಈ ಮೂಲಕ ಮೂಲಭೂತ ಸಾಂವಿಧಾನ ಕರ್ತವ್ಯವನ್ನ ನಿರ್ಲಕ್ಷಿಸಿದ್ದಾರೆ.

ಪ್ರೋಟೋ ಕಾಲ್‌ ಹೇಳೋದೇನು?
ಶಿಷ್ಟಾಚಾರದ ಪ್ರಕಾರ, ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರು ಮೊದಲು ಮಾತನಾಡಬೇಕಿತ್ತು. ಆದ್ರೆ ಮೊದಲು ನಾಡಗೀತೆಯನ್ನ ನುಡಿಸಲಾಯಿತು, ಇದು ಭಾರೀ ಗೊಂದಲ ಏರ್ಪಡಿಸಿತು. ಅಲ್ಲದೇ ನಾಡಗೀತೆ ಬಳಿಕ ರಾಷ್ಟ್ರಗೀತೆ ನುಡಿಸುವಂತೆಯೂ ಹೇಳಲಾಯಿತು. ಹಾಗಾಗಿ ರಾಜ್ಯಪಾಲರು ಸಂಕ್ಷಿಪ್ತ ಶುಭಾಶಯ ಕೋರಿ ಸದನದಿಂದ ಹೊರ ನಡೆದರು. ಇದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ರಾಜ್ಯಪಾಲರ ಆರೋಪ ಏನು?
ರಾಜ್ಯಪಾಲರು ಹೊರನಡೆದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡು ಲೋಕ ಭವನವು, ರಾಜ್ಯಪಾಲರು ವಿಧಾನಸಭೆಯಿಂದ ಹೊರನಡೆದಿದ್ದಕ್ಕೆ ಕಾರಣ ಇದೆ. ರಾಜ್ಯಪಾಲರ ಮೈಕ್ ಅನ್ನು ಪದೇ ಪದೇ ಸ್ವಿಚ್ ಆಫ್ ಮಾಡಲಾಗಿತ್ತು. ಅವರಿಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ ಇದರಿಂದ ಬೇಸರಗೊಂಡರು ಎಂದು ಹೇಳಿದೆ.

12 ಲಕ್ಷ ಕೋಟಿ ಹೂಡಿಕೆ ಬಂದಿಲ್ಲ
ಮುಂದುವರಿದು… ಭಾಷಣದಲ್ಲಿ ಹಲವು ಆಧಾರ ರಹಿತ ಹೇಳಿಕೆಗಳು, ದಾರಿ ತಪ್ಪಿಸುವ ಹೇಳಿಕೆಗಳಿದ್ದವು. ಜನರಿಗೆ ತೊಂದರೆ ಉಂಟು ಮಾಡುವ ಸಾಕಷ್ಟು ವಿಷಯಗಳನ್ನ ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು. ರಾಜ್ಯವು 12 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಆಕರ್ಷಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಿದೆ. ನಿರೀಕ್ಷಿತ ಹೂಡಿಕೆದಾರರ ಜೊತೆಗಿನ ಅನೇಕ ಒಪ್ಪಂದಗಳು ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದೆ. 4 ವರ್ಷಗಳ ಹಿಂದೆ ತಮಿಳುನಾಡು ವಿದೇಶಿ ನೇರ ಹೂಡಿಕೆ ಪಡೆಯುವ 4ನೇ ಅತಿದೊಡ್ಡ ರಾಜ್ಯವಾಗಿತ್ತು. ಇಂದು 6ನೇ ಸ್ಥಾನದಲ್ಲಿ ಉಳಿಯಲು ಹೆಣಗಾಡುತ್ತಿದೆ ಎಂದು ಲೋಕಭವನ ಹೇಳಿಕೆಯಲ್ಲಿ ತಿಳಿಸಿದೆ.

ಮಹಿಳೆಯರ ಸುರಕ್ಷತೆ ನಿರ್ಲಕ್ಷ್ಯ
ಅಲ್ಲದೇ ರಾಜ್ಯದಲ್ಲಿ ಮಹಿಳಾ ಸುರಕ್ಷತೆಯನ್ನ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಪೋಕ್ಸೋ ಅತ್ಯಾಚಾರ ಪ್ರಕರಣ ಶೇ.55, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಶೇ.33 ಕ್ಕಿಂತ ಹೆಚ್ಚಾಗಿದೆ. ಯುವಸಮೂಹ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ದಲಿತರು, ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. 1 ವರ್ಷದಲ್ಲಿ ಸುಮಾರು 20,000 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ 65 ಮಂದಿ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ದೇಶದಲ್ಲಿ ಬೇರೆಲ್ಲೂ ಪರಿಸ್ಥಿತಿ ಇಷ್ಟೊಂದು ಆತಂಕಕಾರಿಯಾಗಿಲ್ಲ. ತಮಿಳುನಾಡನ್ನ ಭಾರತದ ಆತ್ಮಹತ್ಯೆ ರಾಜಧಾನಿ ಎಂದು ಕರೆಯಲಾಗುತ್ತಿದೆ. ಆದರೂ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಶಿಕ್ಷಣದ ಗುಣಮಟ್ಟ ಕುಸಿದಿದ, ಶಿಕ್ಷಣ ಸಂಸ್ಥೆಗಳಲ್ಲಿ ದುರುಪಯೋಗ ನಡೆಯುತ್ತಿದೆ. ಸಾವಿರಾರು ಗ್ರಾಮ ಪಂಚಾಯತ್‌ಗಳು ನಿಷ್ಕ್ರಿಯವಾಗಿದೆ.

ದೇವಾಲಯಗಳಿಗೆ ಟ್ರಸ್ಟಿಗಳಿಲ್ಲ
ರಾಜ್ಯದಲ್ಲಿರುವ ಸಾವಿರಾರು ದೇವಾಲಯಗಳು ಟ್ರಸ್ಟಿಗಳ ಮಂಡಳಿಯಿಲ್ಲದೇ ಮತ್ತು ರಾಜ್ಯ ಸರ್ಕಾರದಿಂದ ನೇರವಾಗಿ ನಿರ್ವಹಿಸಲ್ಪಡುತ್ತಿವೆ. ಪ್ರಾಚೀನ ದೇವಾಲಯಗಳ ಪುನಃಸ್ಥಾಪನೆ ಮತ್ತು ಸಂರಕ್ಷಣೆಯ ಕುರಿತು ಮದ್ರಾಸ್ ಹೈಕೋರ್ಟ್‌ನ ನಿರ್ಣಾಯಕ ನಿರ್ದೇಶನಗಳನ್ನ 5 ವರ್ಷಗಳ ನಂತರವೂ ಜಾರಿಗೆ ತರಲಾಗಿಲ್ಲ. ಹೀಗೆ ಅನೇಕ ನ್ಯೂನತೆಗಳಿವೆ. ಇದೆಲ್ಲವನ್ನ ಮುಚ್ಚಿಟ್ಟು ಸುಳ್ಳು ಹೇಳಿಕೆಗಳನ್ನ ರಾಜ್ಯಪಾಲರ ಭಾಷಣದಲ್ಲಿ ದಾಖಲಿಸಲಾಗಿತ್ತು. ಹೀಗಾಗಿ ರಾಜ್ಯಪಾಲರು ವಿಧಾನಸಭೆಯಿಂದ ಹೊರ ನಡೆಸಿದ್ದಾರೆ ಎಂದು ಲೋಕಭವನ ಪ್ರಕಟಣೆಯಲ್ಲಿ ತಿಳಿಸಿದೆ.

Share This Article