– ರಾಸ್ ಲಫಾನ್ ತೈಲ ಘಟಕದ ಮೇಲೆ ಇರಾನ್ ದಾಳಿ
ಟೆಹ್ರಾನ್: ಮಧ್ಯಪ್ರಾಚ್ಯದ ಘೋರ ಕದನ ಬರೋಬ್ಬರಿ 22ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ಮತ್ತು ಇಸ್ರೇಲ್ (Iran vs Israel) ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ತೈಲ ಘಟಕಗಳು ಹಾಗೂ ಪರಮಾಣು ಸೌಲಭ್ಯ ಕೇಂದ್ರಗಳನ್ನ ಗುರಿಯಾಗಿಸಿ ಇರಾನ್ – ಇಸ್ರೇಲ್ ದಾಳಿ ಪ್ರತಿದಾಳಿ ನಡೆಸುತ್ತಿವೆ.
ಇರಾನ್‌ನ ಪ್ರತೀಕಾರದ ದಾಳಿಗೆ ಇಸ್ರೇಲ್ ಕೂಡ ಮಿಸೈಲ್ ದಾಳಿ ನಡೆಸುತ್ತಿದೆ. ಅದರಂತೆ ಇಂದು ಇರಾನ್‌ನ ನಟಾಂಜ್ ಪರಮಾಣು ಸೌಲಭ್ಯ ಕೇಂದ್ರದ (Natanz Nuclear Facility) ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದ್ರೆ ಸ್ಥಳದಿಂದ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಹೇಳಿದೆ.
ಇರಾನ್‌ನ ಪರಮಾಣು ಸೌಲಭ್ಯ ಕೇಂದ್ರವಾದ ನಟಾಂಜ್ ಅನ್ನು ಯುದ್ಧ ಶುರುವಾದ ಮೊದಲ ವಾರದಲ್ಲೇ ಗುರಿಯಾಗಿಸಲಾಗಿತ್ತು. ಆದ್ರೆ ಈಗ ದಾಳಿ ನಡೆಸಲಾಗಿದ್ದು, ದಾಳಿಯ ಉಪಗ್ರಹ ಚಿತ್ರಗಳು ಬೆಳಕಿಗೆ ಬಂದಿವೆ. ಈ ಕೇಂದ್ರದಿಂದ ಯಾವುದೇ ವಿಕಿರಣ (Radiation) ಸೋರಿಕೆಯಾಗಿಲ್ಲ ಎಂದು ಇರಾನ್‌ನ ಸುದ್ದಿಸಂಸ್ಥೆ ವರದಿ ಮಾಡಿದೆ.
ದಾಳಿಗೆ ಒಳಗಾದ ಪರಮಾಣು ಸೌಲಭ್ಯ ಕೇಂದ್ರವು ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 220 ಕಿಮೀ ದೂರದಲ್ಲಿದೆ. 2025 ರ ಇರಾನ್ – ಇಸ್ರೇಲ್ ಯುದ್ಧದ ಸಮಯದಲ್ಲಿ ಹಾಗೂ ಹಿಂದೆ ಅಮೆರಿಕ ದಾಳಿ ನಡೆಸಿದಾಗಲೂ ನಟಾಂಜ್ ನ್ಯೂಕ್ಲಿಯರ್ ಸೌಲಭ್ಯ ಘಟಕ ದಾಳಿಗೆ ಒಳಗಾಗಿದೆ.
ರಾಸ್ ಲಫಾನ್ ತೈಲ ಘಟಕದ ಮೇಲೆ ಇರಾನ್ ದಾಳಿ
ಇನ್ನೂ ವಿಶ್ವದ ಅತಿದೊಡ್ಡ ತೈಲ ಘಟಕ ರಾಸ್ ಲಫಾನ್ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ವಿಶ್ವದಲ್ಲೇ ತೈಲ ಸಮಸ್ಯೆ ಉಲ್ಭಣವಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ. ಇತ್ತ ರಾಸ್ ಲಫಾನ್ ತೈಲ ಘಟಕದಿಂದಲೇ ಭಾರತ ಶೇ.20 ರಷ್ಟು ಎಲ್‌ಎನ್‌ಜಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕಚ್ಚಾತೈಲ ಬೇಡಿಕೆಯಲ್ಲಿ ಶೇ.88 ರಷ್ಟು ವಿದೇಶಗಳನ್ನೇ ಭಾರತ ಅವಲಂಬಿಸಿದೆ. ಹೀಗಾಗಿ ತೈಲ ಘಟಕಗಳನ್ನ ಟಾರ್ಗೆಟ್ ಮಾಡಿರುವ ಇರಾನ್ ತನ್ನ ದಾಳಿಯನ್ನು ಮುಂದುವರಿಸಿದೆ. ಯುದ್ಧ ಹೀಗೆ ಮುಂದುವರೆದರೆ ಇನ್ನೊಂದು ವಾರದಲ್ಲಿ ಭಾರತಕ್ಕೆ ಅನಿಲ ಸಮಸ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.


