‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

Public TV
2 Min Read

ನ್ಯೂಯಾರ್ಕ್‌: 2024ರ ಟಿ20 ವಿಶ್ವಕಪ್‌ಗಾಗಿ (T20 World Cup) ಕೇವಲ 5 ತಿಂಗಳಲ್ಲಿ ನಿರ್ಮಿಸಲಾಗಿದ್ದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣವನ್ನು (Nassau County Stadium) ಟೂರ್ನಿಯ ಬಳಿಕ ನೆಲಸಮಗೊಳಿಸಲು‌ ಆಯೋಜಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಈ ಕ್ರೀಡಾಂಗಣವನ್ನು 40 ಎಕರೆ ಭೂ ಪ್ರದೇಶದಲ್ಲಿ 30 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 250 ಕೋಟಿ ರೂ.) ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.

ಭಾರತ – ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ಸೇರಿದಂತೆ ಟೂರ್ನಿಯ ಒಟ್ಟು 8 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಬುಧವಾರ ಭಾರತ-ಅಮೆರಿಕ (Ind vs USA) ಪಂದ್ಯ ಇಲ್ಲಿ ನಡೆದ ಕೊನೆಯ ಲೀಗ್‌ ಸುತ್ತಿನ ಪಂದ್ಯ ಎಂದು ಹೇಳಲಾಗುತ್ತಿದೆ. ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್‌ ಇನ್‌ ಪಿಚ್‌ಗಳನ್ನು ಅಳವಡಿಸಲಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ

ಶುಕ್ರವಾರ ನೆಲಸಮ?
ಈಗಾಗಲೇ 8 ಲೀಗ್‌ ಪಂದ್ಯಗಳು ಕೌಂಟಿ ಸ್ಟೇಡಿಯಂನಲ್ಲಿ ನಡೆದಿದ್ದು, ಜೂನ್‌ 14ರಂದೇ ಕ್ರೀಡಾಂಗಣ ಧ್ವಂಸಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ‌ಹತ್ತಾರು‌ ಬುಲ್ಡೋಜರ್‌ಗಳನ್ನು ಕ್ರೀಡಾಂಗಣದ ಹೊರಗೆ ನಿಲ್ಲಿಸಲಾಗಿದೆ. ಈ ಕುರಿತ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕ್ರೀಡಾಂಗಣದ ಮಾಡ್ಯುಲರ್ ಘಟಕಗಳನ್ನು ಕಿತ್ತುಹಾಕಿ ಮರುಬಳಕೆ ಮಾಡಲಾಗುತ್ತದೆ, ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಅಭಿಮಾನಿಗಳು ಉನ್ನತ-ಶ್ರೇಣಿಯ ಟರ್ಫ್ ಮತ್ತು ಮೂಲಸೌಕರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ನಸ್ಸೌ ಕೌಂಟಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಕೇವಲ 119 ರನ್‌ಗಳಿಗೆ ಭಾರತ ಆಲೌಟ್‌ ಆಗಿತ್ತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಪಾಕ್‌ ಕೇವಲ 113 ರನ್‌ಗಳಿಸಿ ಸೋಲೊಪ್ಪಿಕೊಂಡಿತ್ತು. ಅಲ್ಲದೇ ಬುಧವಾರ ಯುಎಸ್‌ಎ ತಂಡ ನೀಡಿದ್ದ 111 ರನ್‌ಗಳ ತಲುಪುವುದಕ್ಕೂ ಭಾರತ ತಿಣುಕಾಡಿತ್ತು. ಇದನ್ನೂ ಓದಿ:  ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

Share This Article