– ಉದ್ಯಮಿ ಮೋಹನ್ ದಾಸ್ ಪೈ ಪ್ರಚಾರಕ್ಕೆ ಮಾತಾಡೋದು ಬಿಡಲಿ
ಬೆಂಗಳೂರು: ನಾನು ಹಿರಿಯ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ (Narendra Swamy) ಹೇಳಿದ್ದಾರೆ.
ನವೆಂಬರ್ ಕ್ರಾಂತಿ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವು ಎಲ್ಲರು ಬದ್ಧರು. ಸುಸ್ಥಿರ ಸರ್ಕಾರವನ್ನು ಸಿದ್ದರಾಮಯ್ಯ ನಡೆಸುತ್ತಾ ಬಂದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನ ವೀರಶೈವ, ಲಿಂಗಾಯತ ಸಚಿವರಲ್ಲಿ ಮತ್ತೆ ಬಿರುಕು?
ರಾಹುಲ್ ಗಾಂಧಿ ಇಡೀ ದೇಶ ಸುತ್ತಿ ದೇಶದ ಲೋಪದ ಬಗ್ಗೆ ಮಾತಾಡ್ತಾ ಇದ್ದಾರೆ. ಅವರ ಕೈ ಬಲ ಪಡಿಸೋದು ನಮ್ಮ ಉದ್ದೇಶ. ಹಿರಿಯನಾಗಿ ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ಇದನ್ನ ಹೈಕಮಾಂಡ್ ಒಪ್ಪಿಗೆಗೆ ಬಿಡ್ತೀನಿ. ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣನೆ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಪ್ಪಳದ ಕಾಂಗ್ರೆಸ್ ಸಚಿವ, ಸಂಸದ, ಶಾಸಕರು ಮೋಸಗಾರರು: ಸಿಎಂ ಭೇಟಿಗೂ ಮುನ್ನ ಇಕ್ಬಾಲ್ ಅನ್ಸಾರಿ ಬಾಂಬ್
ಸಿಎಂ ಬದಲಾವಣೆ ಆಗ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನಾವ್ಯಾರು ಮಾತಾಡೋಕೆ, ಪ್ರಶ್ನೆ ಮಾಡೋದಕ್ಕೆ ಯಾರಿಗೂ ಅವಕಾಶ ಇಲ್ಲ. ನಮ್ಮ ಹೈಕಮಾಂಡ್ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎಂದಿದ್ದಾರೆ.
ಪ್ರಚಾರಕ್ಕೆ ಮಾತಾಡೋದು ಬಿಡಿ
ಮಾಲಿನ್ಯ ನಿಯಂತ್ರಣ ಬೋರ್ಡ್ ನಲ್ಲೂ ಭ್ರಷ್ಟಾಚಾರ ಇದೆ ಎಂಬ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉದ್ಯಮಿ ಮೋಹನ್ ದಾಸ್ ಪೈ ಪ್ರಚಾರಕ್ಕೆ ಮಾತಾಡೋದು ಬಿಟ್ಟು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಮೋಹನ್ ದಾಸ್ ಪೈ ಅತ್ಯಂತ ವಿದ್ಯಾವಂತ, ಸಂಭಾವಿತ ವ್ಯಕ್ತಿ ಅಂತ ತಿಳಿದ್ದಿದ್ದೇನೆ. ಪ್ರಚೋದನೆ ಆಗಿ ಮಾತಾಡೋ ಬದಲು ಸಮಸ್ಯೆ ಬಗೆಹರಿಸಲು ಗಮನ ಹರಿಸೋದು ಒಳ್ಳೆಯದು. ಎಲ್ಲಾದ್ರು ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ, ಅವುಗಳನ್ನು ಸರಿಪಡಿಸುತ್ತೇವೆ.ವಿನಾಕಾರಣ ಸುದ್ದಿಗೋಸ್ಕರ, ಪ್ರಚಾರಕೋಸ್ಕರ ಮಾತಾಡೋದು ನಿಮ್ಮಂತ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.