ಈಗ ಚುನಾವಣೆ ನಡೆದರೆ ಎನ್‍ಡಿಎ ಮತ್ತೊಮ್ಮೆ ಅಧಿಕಾರಕ್ಕೆ!

Public TV
2 Min Read

ನವದೆಹಲಿ: ದೇಶದಲ್ಲಿ ಈಗ ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್‍ಡಿಎ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಲೋಕನೀತಿ- ಸಿಎಸ್‍ಡಿಎಸ್- ಎಬಿಪಿ ನ್ಯೂಸ್ ನಡೆಸಿದ “ಮೂಡ್ ಆಫ್ ದ ನೇಶನ್” ಮತ್ತು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.

ಎಬಿಪಿ ನ್ಯೂಸ್ ಸಮೀಕ್ಷೆ
2018ರ ಜನವರಿಯಿಂದ ದೇಶದ 19 ರಾಜ್ಯಗಳ 15,859 ಜನರನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಲಾಗಿದೆ. ಎನ್‍ಡಿಎಗೆ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ 2014ಕ್ಕೆ ಹೋಲಿಸಿದರೆ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್‍ಡಿಎ 274, ಕಾಂಗ್ರೆಸ್ ನೇತೃತ್ವದ ಯುಪಿಎ 164, ಇತರರು 105 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದರೆ ಎನ್‍ಡಿಎ ಒಟ್ಟು 336 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಸಮೀಕ್ಷೆಯಲ್ಲಿ 34% ಜನ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸೂಕ್ತ ಎಂದಿದ್ದರೆ 24% ಮಂದಿ ರಾಹುಲ್ ಪರ ಒಲವು ವ್ಯಕ್ತಪಡಿಸಿದ್ದಾರೆ.

ಜಿಎಸ್‍ಟಿ ಅಡ್ಡ ಪರಿಣಾಮ, ನಿರುದ್ಯೋಗ, ದಲಿತರ ಮೇಲಿನ ಹಲ್ಲೆ ಪ್ರಕರಣಗಳಿಂದಾಗಿ ಎನ್‍ಡಿಎ ಸ್ಥಾನ ಸ್ವಲ್ಪ ಕಡಿಮೆಯಾಗಲಿದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‍ಗೆ 49% ಮತ ಬಿದ್ದರೆ ಬಿಜೆಪಿಗೆ 34% ಮತ ಬೀಳಲಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ 44% ಮತ ಪಡೆದರೆ ಬಿಜೆಪಿಗೆ 39% ಮತ ಬೀಳಲಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಮಾಣದ ಮತ ಬಿದ್ದರೆ ಬಿದ್ದರೆ ಬಿಜೆಪಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರವನ್ನು ಕಳೆದುಕೊಳ್ಳಲಿದೆ. ಅಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲೂ ಎನ್‍ಡಿಎಗೆ ಹೊಡೆತ ಬೀಳಲಿದೆ ಎಂದು ಸಮೀಕ್ಷೆ ಹೇಳಿದೆ.

ಟೈಮ್ಸ್ ನೌ ಸಮೀಕ್ಷೆ
4 ವರ್ಷಗಳ ಮೋದಿ ನೇತೃತ್ವದ ಸರಕಾರದ ಸಾಧನೆ ಬಗ್ಗೆ ಮೆ 9ರಿಂದ 22ರ ವರೆಗೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಒಟ್ಟು 13,575 ಮಂದಿಯನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದೆ. ಇದರಲ್ಲಿ 49% ಮಂದಿ ಉತ್ತಮ ಸರ್ಕಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಮೋದಿಯೇ ಮುಂದುವರಿಯಬೇಕು ಎಂದು 53% ಮಂದಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗೆ 23%ರಷ್ಟು ಬೆಂಬಲ ಸಿಕ್ಕಿದೆ. 2014ರಲ್ಲಿ ಬಿಜೆಪಿ 282 ಸ್ಥಾನ ಗೆದ್ದರೆ 2018ರಲ್ಲಿ 318 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ. 55% ಮಂದಿ ಎನ್‍ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರೆ 45% ಜನ ಅಧಿಕಾರಕ್ಕೆ ಬರುವುದು ಬೇಡ ಎಂದಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *