– ಜರ್ಮನಿಯ ಮಾಧ್ಯಮಗಳಲ್ಲಿ ವರದಿ
– ಸುಂಕ ಸಮರ ಆರಂಭಿಸಿದಕ್ಕೆ ಪ್ರತಿಕ್ರಿಯಿಸದ ಮೋದಿ
ಬರ್ಲಿನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 4 ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆ ಮಾತನಾಡಲು ಪ್ರಯತ್ನಿಸಿದ್ದರು. ಆದರೆ ಮೋದಿ ಅವರು ಟ್ರಂಪ್ ಜೊತೆ ದೂರವಾಣಿಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ ಎಂದು ಜರ್ಮನಿಯ ಮಾಧ್ಯಮವೊಂದು ವರದಿ ಮಾಡಿದೆ
ಭಾರತದ ಮೇಲೆ ಸುಂಕ ಸಮರ (Tariff War) ಆರಂಭಿಸಿದ ಬಳಿಕ ಟ್ರಂಪ್ ಕರೆ ಮಾಡಿ ಮಾತನಾಡಲು ಮುಂದಾಗಿದ್ದರು ಎಂದು ಜರ್ಮನ್ ಪತ್ರಿಕೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ವರದಿ ಮಾಡಿದೆ.
ಜುಲೈ 20 ರಂದು ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ಸುಂಕವನ್ನು ವಿಧಿಸಿತ್ತು. ನಂತರ ರಷ್ಯಾದಿಂದ (Russia) ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಮತ್ತೆ 25% ಸುಂಕವನ್ನು ಡೊನಾಲ್ಡ್ ಟ್ರಂಪ್ ಹಾಕಿದ್ದಾರೆ. ಸದ್ಯ ಬ್ರೆಜಿಲ್ ಹೊರತುಪಡಿಸಿ ಅತಿ ಹೆಚ್ಚು ಸುಂಕ ಭಾರತದ ಮೇಲೆ ವಿಧಿಸಿದ್ದಾರೆ.
ಟ್ರಂಪ್ ನಿರ್ಧಾರದಿಂದ ಅಮೆರಿಕ ಭಾರತದ ನಡುವೆ ಬಿಕ್ಕಟ್ಟು ಆರಭವಾಗಿದೆ. ಬಿಕ್ಕಟ್ಟು ಪರಿಹಾರಕ್ಕೆ ಕರೆ ಮಾಡಿ ಮೋದಿಯನ್ನು ಮಣಿಯುವಂತೆ ಮಾಡಲು ಟ್ರಂಪ್ ನಾಲ್ಕೈದು ಬಾರಿ ಕರೆ ಮಾಡಿದ್ದಾರೆ. ಆದರೆ ಮೋದಿ ಟ್ರಂಪ್ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಭಾರತದ ಮೇಲೆ 50%ರಷ್ಟು ಸುಂಕ – ಅಮೆರಿಕದಿಂದ ಅಧಿಸೂಚನೆ
ಭಾರತದ ವಿದೇಶಾಂಗ ಸಚಿವಾಲಯ (MEA) ಪ್ರಕಾರ, ಜೂನ್ 17 ರಂದು ಅಧ್ಯಕ್ಷರ ಕೋರಿಕೆಯ ಮೇರೆಗೆ ಮೋದಿ ಟ್ರಂಪ್ ಅವರೊಂದಿಗೆ ಕೊನೆಯದಾಗಿ ಮಾತನಾಡಿದರು. ಕೆನಡಾದಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗಬೇಕಿತ್ತು. ಆದರೆ ಟ್ರಂಪ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಮೆರಿಕಕ್ಕೆ ಮರಳಿದ್ದರಿಂದ ಭೇಟಿಯಾಗಿರಲಿಲ್ಲ.
ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ಟ್ರಂಪ್ ಭಾರತದ ಆರ್ಥಿಕತೆಯನ್ನು ಡೆಡ್ ಎಕಾನಮಿ ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಮೋದಿ, ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗುವತ್ತ ಸಾಗುತ್ತಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.
ಟ್ರಂಪ್ ಸುಂಕ ಸಮರಕ್ಕೆ ತಲೆ ಕೆಡಿಸಿಕೊಳ್ಳದ ಮೋದಿ, ರೈತರು (Faramers) ಮತ್ತು ಮೀನುಗಾರರಿಗೆ (Fishermen) ಸಮಸ್ಯೆಯಾಗುವ ಯಾವುದೇ ಹಿತಾಸಕ್ತಿಯ ಜೊತೆ ಭಾರತ (India) ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಇದನ್ನೂ ಓದಿ: ಮೋದಿ, ಪುಟಿನ್‌ರನ್ನು ಖುದ್ದಾಗಿ ಸ್ವಾಗತಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಭಾರತ ತನ್ನ ರೈತರು, ಜಾನುವಾರು ಮಾಲೀಕರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸರ್ಕಾರದ ನಿರ್ಧಾರದಿಂದ ಭಾರೀ ಬೆಲೆ ತೆರಬೇಕಾಗುತ್ತದೆ ಎನ್ನುವುದು ನನಗೆ ತಿಳಿದಿದೆ. ಇದಕ್ಕೆ ನಾನು ಸಿದ್ಧನಿದ್ದೇನೆ. ದೇಶದ ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರ ಹಿತದೃಷ್ಟಿಯಿಂದ ಭಾರತ ಎಲ್ಲದ್ದಕ್ಕೂ ಸಿದ್ಧವಾಗಿದೆ ಎಂದು ಹೇಳಿದ್ದರು.
ಟ್ರಂಪ್ ಒತ್ತಡಕ್ಕೆ ಮಣಿಯದ್ದು ಯಾಕೆ?
ಟ್ರಂಪ್ ಸುಂಕ ಸಮರ ಆರಂಭಿಸಿದ ಕೂಡಲೇ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ ಮೇಲೆ ತೆರಿಗೆ ಸಮರ ಆರಂಭಿಸಿದ್ದರು. ನಂತರ ಉಳಿದ ದೇಶಗಳು ವ್ಯಾಪಾರ ಸಂಬಂಧ ಮಾತುಕತೆ ನಡೆಸಲು ಆಸಕ್ತಿ ತೋರಿದ ಬೆನ್ನಲ್ಲೇ ಅಮೆರಿಕ ಸುಂಕ ಸಮರವನ್ನು ತಡೆ ಹಿಡಿದಿತ್ತು. ಈ ಸಂದರ್ಭದಲ್ಲಿ ಭಾರತ ಅಮೆರಿಕದ ಜೊತೆ ವ್ಯಾಪಾರ ಮಾತುಕತೆ ನಡೆಸತೊಡಗಿತು.
ಬಹುತೇಕ ವಿಚಾರಗಳ ಮಧ್ಯೆ ಭಾರತ ಮತ್ತು ಅಮೆರಿಕ ಒಪ್ಪಿಗೆ ನೀಡಿದರೂ ಮಹತ್ವದ ಕೆಲ ವಿಚಾರಗಳ ಭಾರತಕ್ಕೆ ಒಪ್ಪಿಗೆ ನೀಡಿಲ್ಲ. ಮುಖ್ಯವಾಗಿ ಕೃಷಿ, ಹೈನು ಉತ್ಪನ್ನಗಳ ವಲಯ. ಮೀನುಗಾರಿಕೆ ಸಂಬಂಧಿಸಿದಂತೆ ಅಮೆರಿಕದ ಉತ್ಪನ್ನಗಳಿಗೆ ಮುಕ್ತವಾಗಿಸಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿಲ್ಲ. ಅಮೆರಿಕ ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋಮೊಬೈಲ್ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಬಾರದು ಎಂದು ಭಾರತ ಇರಿಸಿರುವ ಬೇಡಿಕೆಯನ್ನು ಒಪ್ಪಿಲ್ಲ.
ಅಮೆರಿಕದ ಡೈರಿ ಉತ್ಪನ್ನಗಳಿಗೆ ಭಾರತ ಅನುಮತಿ ನೀಡಿಲ್ಲ ಯಾಕೆ ಎನ್ನುವುದಕ್ಕೆ ಕಾರಣ ಇದೆ. ಭಾರತದಲ್ಲಿ ದನಗಳಿಗೆ ಹುಲ್ಲು, ಒಣಗಿದ ಮೇವು, ಧಾನ್ಯಗಳು, ಮತ್ತು ಪಶು ಆಹಾರವನ್ನು ನೀಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಹಾಗಲ್ಲ. ಅಮೆರಿಕದಲ್ಲಿ ಜಾನುವಾರುಗಳಿಗೆ ಆಹಾರವಾಗಿ ನಾನ್ ವೆಜ್ ಆಹಾರಗಳನ್ನು ನೀಡಲಾಗುತ್ತದೆ. ಮಾಂಸ ಮತ್ತು ಮೂಳೆ ಊಟ, ಒಣಗಿದ ರಕ್ತ ಮತ್ತು ಕೋಳಿ ತ್ಯಾಜ್ಯ ಸೇರಿದಂತೆ ಪ್ರಾಣಿ ಉತ್ಪನ್ನಗಳನ್ನು ಜಾನುವಾರು ಆಹಾರದಲ್ಲಿ ಬಳಸಲು ಅವಕಾಶ ನೀಡುತ್ತವೆ. ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮೇವಿನ ವೆಚ್ಚವನ್ನು ಕಡಿಮೆ ಮಾಡಲು ಅಮೆರಿಕದ ರೈತರು ಈ ಆಹಾರವನ್ನು ನೀಡುತ್ತಾರೆ. ಈ ರೀತಿಯ ಆಹಾರ ನೀಡಲು ಅಮೆರಿಕದ ಕಾನೂನಿನಲ್ಲಿ ಅನುಮತಿ ಇದೆ.
ಭಾರತದಲ್ಲಿ ಹಸುಗಳನ್ನು ಪವಿತ್ರ ಮತ್ತು ಪೂಜ್ಯ ಭಾವದಿಂದ ನೋಡಲಾಗುತ್ತದೆ. ಹಸುಗಳು ತಿಂದ ಪ್ರಾಣಿ ಉತ್ಪನ್ನಗಳಿಂದ ಬರುವ ಹಾಲು ಸೇವಿಸುವುದನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸುಮಾರು 8 ಕೋಟಿಗೂ ಅಧಿಕ ಮಂದಿ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿದ್ದಾರೆ. ಭಾರತದ ಜಿಡಿಪಿಗೆ ಹೈನುಗಾರಿಕೆ 5% ಕೊಡುಗೆ ನೀಡುತ್ತದೆ.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣ ಭಾರತದ ಮಾರುಕಟ್ಟೆ ಪ್ರವೇಶಿಲು ಅಮೆರಿಕ ಮೊದಲಿನಿಂದಲೂ ಭಾರೀ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಭಾರತ ಅನುಮತಿ ನೀಡಿದರೆ ರೈತರು ಬೀದಿಗೆ ಇಳಿಯುವ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರವೇ ಪತನ ಹೊಂದುವ ಸಾಧ್ಯತೆಯಿದೆ. ಈ ಕಾರಣಕ್ಕೆ ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಭಾರತದ ಮಾರುಕಟ್ಟೆಗೆ ಅಮೆರಿಕದ ಡೈರಿ ಉತ್ಪನ್ನ ಪ್ರವೇಶಕ್ಕೆ ಅನುಮತಿ ನೀಡಿಲ್ಲ.