ನಿಮ್ಮ ಕ್ಷೇತ್ರದ ಮೇಲೆ ನಿಮಗೆ ನಂಬಿಕೆ ಇಲ್ವಾ: ಮೋದಿ, ರಾಹುಲ್‍ಗೆ ಪ್ರಕಾಶ್ ರೈ ಟಾಂಗ್

Public TV
2 Min Read

– ಸುಮಲತಾ ಬೆಂಬಲವಾಗಿ ನಾನು ಇದ್ದೇನೆ
– ನಿಖಿಲ್‍ಗೆ ಇದು ರಾಜಕೀಯಕ್ಕೆ ಬರುವ ವಯಸ್ಸಲ್ಲ
– ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕೀಯವಲ್ಲ

ಬೆಂಗಳೂರು: ಎರಡು ಕ್ಷೇತ್ರಗಳಿಂದ ಸ್ಪರ್ಧೆ ಯಾಕೆ? ನಿಮ್ಮ ಕ್ಷೇತ್ರದಲ್ಲಿ ನಿಂತು ಗೆಲ್ಲುವ ವಿಶ್ವಾಸ ನಿಮಗೆ ಇಲ್ಲವೇ ಎಂದು ಬಹು ಭಾಷಾ ನಟ ಪ್ರಕಾಶ್ ರೈ ಅವರು ಹೆಸರು ಹೇಳದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಾರೇ ಆಗಲಿ ಯಾಕೆ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಬೇಕು? ಹೀಗೆ ಮಾಡಿದರೆ ಜನರು ಪಾವತಿಸಿದ ತೆರಿಗೆ ಹಣ ವ್ಯರ್ಥವಾಗುತ್ತದೆ. ಹಣ ಯಾರಪ್ಪನದ್ದು ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಬೆಂಬಲ ನೀಡುವ ಬಗ್ಗೆ ವಿಚಾರ ಮಾಡುತ್ತೇವೆ ಎಂದಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹತ್ತು ವರ್ಷದಿಂದ ಗೆದ್ದಿಲ್ಲ. ಹೀಗಾಗಿ ನನಗೆ ಬೆಂಬಲ ಕೊಡುವಂತೆ ಕಾಂಗ್ರೆಸ್ ನಾಯಕರಿಗೆ ಕೇಳಿದ್ದೇನೆ. ಇತ್ತ ಆಪ್, ಸಿಪಿಎಂ, ಸಿಪಿಐ, ದಲಿತ ಸಂಘರ್ಷ ಸಮಿತಿಗಳಿಂದ ಬೆಂಬಲ ಸಿಕ್ಕಿದೆ. ಆದರೆ ನನಗೆ ಬಿಜೆಪಿ ಬೆಂಬಲ, ಆಡಳಿತ ವೈಖರಿ ಇಷ್ಟವಿಲ್ಲ ಎಂದು ಹೇಳಿದರು.

ಬೆಂಗಳೂರು ಕೇಂದ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸ್ಪರ್ಧೆಯ ಕುರಿತು ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ ಅವರು, ರಾಹುಲ್ ಗಾಂಧಿ ಇಲ್ಲಿಯವರಾ? ಈ ಕ್ಷೇತ್ರ, ಇಲ್ಲಿನ ಜನರ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ ಅವರು, ಮಂಡ್ಯದ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು. ಸುಮಲತಾ ಅವರು ಅನುಭವಸ್ಥರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಹೇಳುವುದಕ್ಕೆ ಆಗಲ್ಲ. ಅವರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸ್ಪರ್ಧೆ ನಡೆಸುವ ಹಕ್ಕಿದೆ. ಸುಮಲತಾ ಬೆಂಬಲವಾಗಿ ನಾನು ಇದ್ದೇನೆ ಎಂದರು.

ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಸ್ವಲ್ಪ ವಿಳಂಬವಾಗಿ ಬರಬೇಕಿತ್ತು. ಇದು ರಾಜಕೀಯಕ್ಕೆ ಬರುವ ವಯಸ್ಸಲ್ಲ. ನಿಖಿಲ್ ಯುವಕರು, ಇನ್ನಷ್ಟು ಅನುಭವದ ಅಗತ್ಯವಿದೆ. ಈಗಷ್ಟೇ ಸಿನಿಮಾ ರಂಗಕ್ಕೆ ಬಂದಿದ್ದಾರೆ ಎಂದ ಪ್ರಕಾಶ್ ರೈ ಅವರು, ಇದನ್ನು ನಿಖಿಲ್‍ಗೆ ಪ್ರೀತಿಯಿಂದಲೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕೀಯವಲ್ಲ. ಕುಟುಂಬ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಕುಟುಂಬ ರಾಜಕೀಯ. ಅದನ್ನು ಜನರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *