ಮೋದಿ ನನ್ನ ಫ್ರೆಂಡ್‌ ಎನ್ನುತ್ತಲೇ ಭಾರತದ ವಸ್ತುಗಳಿಗೆ 26% ಪ್ರತಿ ಸುಂಕ ಘೋಷಿಸಿದ ಟ್ರಂಪ್‌

Public TV
2 Min Read

ವಾಷಿಂಗ್ಟನ್‌: Make America Great Again (MAGA) ಮಾಡುವ ಕನಸು ಕಾಣುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಭಾರತ (India) ಸೇರಿದಂತೆ ವಿವಿಧ ದೇಶಗಳಿಂದ ಅಮೆರಿಕಕ್ಕೆ (USA) ಆಮದಾಗುತ್ತಿರುವ ಸರಕುಗಳಿಗೆ ಸುಂಕ ವಿಧಿಸುವ ‘ಪ್ರತಿ ಸುಂಕ’ ನೀತಿಯನ್ನು ಘೋಷಿಸಿದ್ದಾರೆ.

ಶ್ವೇತಭವನದ ರೋಸ್‌ ಗಾರ್ಡನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಟ್ರಂಪ್‌ ಪ್ರತಿ ಸುಂಕ (Reciprocal Tariff) ನೀತಿಯ ವಿವರಗಳನ್ನು ತಿಳಿಸಿದರು. ಭಾರತ ಮತ್ತು ಚೀನಾ ನಮಗೆ ವಿಧಿಸುವ ತೆರಿಗೆ ಪೈಕಿ ನಾವು ಅರ್ಧದಷ್ಟು ವಿಧಿಸುವ ಮೂಲಕ ದಯೆ ತೋರುತ್ತಿದ್ದೇವೆ. ಅಮೆರಿಕವು ಭಾರತದ ಮೇಲೆ 26% ಮತ್ತು ಚೀನಾದ ಮೇಲೆ 34% ರಷ್ಟು ಆಮದು ಸುಂಕವನ್ನು ವಿಧಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಎಲಾನ್‌ ಮಸ್ಕ್‌ ಹೊರಕ್ಕೆ?

 

 

ಪ್ರಧಾನಿ ನರೇಂದ್ರ ಮೋದಿ (Narendra Modi) ಇತ್ತೀಚಿಗೆ ಅಮೆರಿಕಕ್ಕೆ ಆಗಮಿಸಿದ್ದರು. ಅವರು ನನ್ನ ಉತ್ತಮ ಸ್ನೇಹಿತ. ಆದರೆ ನಾನು ಅವರಲ್ಲಿ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದೇನೆ. ಭಾರತ ನಮಗೆ 52% ರಷ್ಟು ಸುಂಕ ವಿಧಿಸುತ್ತದೆ. ಆದ್ದರಿಂದ ನಾವು ಅವರಿಗೆ ಅದರ ಅರ್ಧದಷ್ಟು ಅಂದರೆ 26% ಪ್ರತಿಶತ ಸುಂಕವನ್ನು ವಿಧಿಸುತ್ತೇವೆ ಎಂದರು.

ಬಹಳ ಸಮಯದಿಂದ ಇತರ ದೇಶಗಳು ನಮ್ಮ ನೀತಿಗಳ ಲಾಭವನ್ನು ಪಡೆದುಕೊಂಡು ನಮ್ಮನ್ನು ಲೂಟಿ ಮಾಡಿವೆ. ಆದರೆ ಇನ್ನು ಮುಂದೆ ಈ ರೀತಿ ಲೂಟಿ ಮಾಡಲು ಬಿಡುವುದಿಲ್ಲ. ಏ.2 ಅಮೆರಿಕ ತನ್ನ ಕೈಗಾರಿಕೆಗಳನ್ನು ಮರಳಿ ಪಡೆದ ದಿನ. ಇನ್ನು ಮುಂದೆ ನಾವು ಅವರು ವಿಧಿಸುವಷ್ಟೇ ಸುಂಕ ವಿಧಿಸುತ್ತೇವೆ ಇದು ಬಹಳ ಸರಳ. ಅವರು ಎಷ್ಟು ವಿಧಿಸುತ್ತಾರೋ ಅಷ್ಟೇ ನಾವು ಅವರಿಗೆ ವಿಧಿಸುತ್ತೇವೆ ಎಂದು ತಿಳಿಸಿದರು.

 

ಈ ನಿರ್ಧಾರದಿಂದ ನಾವು ನಮ್ಮ ಉದ್ಯೋಗಗಳನ್ನು ಮರಳಿ ಪಡೆಯುತ್ತೇವೆ. ನಮ್ಮ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯವಹಾರಗಳನ್ನು ಮರಳಿ ಪಡೆಯುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತಗೊಳಿಸುತ್ತೇವೆ.

Share This Article