ಸಚಿವ ಸಂಪುಟ ವಿಸ್ತರಣೆ ವಿಳಂಬ – ಪ್ರಧಾನಿ ಭೇಟಿ ಮಾಡಿ ಚರ್ಚಿಸ್ತಾರಾ ಸಿಎಂ?

Public TV
2 Min Read

ಬೆಂಗಳೂರು: ರಾಜ್ಯದಲ್ಲಿ 15 ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ ಬಂದು ಒಂದು ತಿಂಗಳಾಗುತ್ತಾ ಬಂತು. ಆದರೆ ನೂತನ ಶಾಸಕರಿಗೆ ಇನ್ನೂ ಸಚಿವರಾಗುವ ಭಾಗ್ಯ ಸಿಕ್ಕಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಚನೆಗೆ ಕಾರಣಕರ್ತರಾದ ನೂತನ ಶಾಸಕರು ಇನ್ನೂ ಸಚಿವರಾಗದೇ ಸಂಕಟ ಅನುಭವಿಸುತ್ತಿದ್ದಾರೆ.

ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ನೀಡದ್ದರಿಂದ ವಿಳಂಬ ಆಗುತ್ತಿದೆ. ಈ ಮಧ್ಯೆ ಇವತ್ತು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಶಾಸಕರ ನಿರೀಕ್ಷೆ ಮತ್ತೆ ಗರಿಗೆದರಿದೆ. ಶಾಸಕರ ಒತ್ತಾಯಕ್ಕೆ ಮಣಿದು ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಗೆ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿಂದಲೂ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಿರಲಿಲ್ಲ. ಸರ್ಕಾರ ರಚನೆ ಬಳಿಕ ಈಗ ಪ್ರಧಾನಿ ಮೋದಿ ಮೊದಲ ಭೇಟಿ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ತುಮಕೂರು ಕಾರ್ಯಕ್ರಮ ಮುಗಿಸಿ ಸಂಜೆ 7:30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಂದು ರಾತ್ರಿ ರಾಜಭವನದಲ್ಲೇ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಮೋದಿ ಆತಿಥ್ಯಕ್ಕೆ ಈಗಾಗಲೇ ರಾಜಭವನದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಒಂದು ದಿನದ ಮಟ್ಟಿಗೆ ರಾಜ್ಯದಲ್ಲೇ ಉಳಿಯುತ್ತಿರುವ ಪ್ರಧಾನಿಗಳ ಭೇಟಿಗೆ ಸಿಎಂ ಸಮಯಾವಕಾಶ ಕೋರಿದ್ದಾರೆ. ರಾಜಭವನದಲ್ಲಿ ಭೇಟಿಗೆ ಅವಕಾಶ ಕಲ್ಪಿಸುವಂತೆ ಪ್ರಧಾನಿ ಕಚೇರಿಗೆ ಸಿಎಂ ಯಡಿಯೂರಪ್ಪ ಈಗಾಗಲೇ ಮನವಿ ಮಾಡಿ ಸಮಯ ಕೇಳಿದ್ದಾರೆ ಎನ್ನಲಾಗಿದೆ. ಮೋದಿ ಭೇಟಿಗೆ ಅವಕಾಶ ಸಿಕ್ಕಿದರೆ ಇಂದು ರಾತ್ರಿ ರಾಜಭವನದಲ್ಲಿ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಭೇಟಿಗೆ ಅನುಮತಿ ಸಿಕ್ಕರೆ ರಾಜ್ಯ ರಾಜಕೀಯದ ವಿದ್ಯಮಾನಗಳನ್ನು ಪಿಎಂಗೆ ಸಿಎಂ ಒಪ್ಪಿಸಲಿದ್ದಾರೆ. ಜೊತೆಗೆ ಕೇಂದ್ರದ ಅನುದಾನ ಬಾಕಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರದ ನೆರವಿಗೂ ಮನವಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಸಿಎಎ ಕುರಿತು ರಾಜ್ಯದಲ್ಲಿ ನಡೆದ ವಿದ್ಯಮಾನಗಳನ್ನೂ ಸಿಎಂ ವಿವರಿಸಲಿದ್ದಾರಂತೆ. ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡುವ ಸಾಧ್ಯತೆಯಿದೆ. ಸಂಪುಟ ವಿಸ್ತರಣೆಗೆ ಆದಷ್ಟು ಬೇಗ ಗ್ರೀನ್ ಸಿಗ್ನಲ್ ಕೊಡುವಂತೆಯೂ ಸಿಎಂ ಮನವಿ ಮಾಡಲಿದ್ದಾರಂತೆ. ಡಿಸಿಎಂ ಹುದ್ದೆಗಳ ಕುರಿತು ಚರ್ಚಿಸಲು ಸಹ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಬಿಎಸ್‌ವೈಗೆ ಪ್ರಧಾನಿ ನರೇಂದ್ರ ಮೋದಿಯವರ ನೇರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಮೋದಿಯವರು ರಾಜ್ಯದಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಭವನ್ನು ಅವರ ಭೇಟಿಗೆ ಬಳಸಿಕೊಳ್ಳಲು ಸಿಎಂ ಪ್ರಯತ್ನಿಸುತ್ತಿದ್ದಾರೆ. ಸಿಎಂ ಭೇಟಿಗೆ ಪ್ರಧಾನಿಯವರು ಸಮಯ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಷ್ಟೇ.

Share This Article
Leave a Comment

Leave a Reply

Your email address will not be published. Required fields are marked *