ಶಿಷ್ಟಾಚಾರ ಮುರಿದು ವಿಮಾನ ನಿಲ್ದಾಣಕ್ಕೆ ತೆರಳಿ ಯುಎಇ ಅಧ್ಯಕ್ಷರನ್ನು ಸ್ವಾಗತಿಸಿದ ಮೋದಿ

2 Min Read

ನವದೆಹಲಿ: ಶಿಷ್ಟಾಚಾರ ಮುರಿದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed Al Nahyan) ಅವರನ್ನು ದೆಹಲಿಯ (Delhi) ಪಾಲಂ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.

2 ಗಂಟೆಗಳ ಭೇಟಿಗೆ ಯುಎಇ ಮುಖ್ಯಸ್ಥರು ಆಗಮಿಸಿದ್ದು ಮೋದಿ ಅವರೇ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದರು. ಎಕ್ಸ್‌ನಲ್ಲಿ ಮೋದಿ ನನ್ನ ಸಹೋದರನಿಗೆ ಸ್ವಾಗತ ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಒಂದೇ ಕಾರಿನಲ್ಲಿ ತೆರಳಿದ್ದು ವಿಶೇಷವಾಗಿತ್ತು.

“ನನ್ನ ಸಹೋದರ, ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರ ಭೇಟಿಯು ಬಲವಾದ ಭಾರತ-ಯುಎಇ ಸ್ನೇಹಕ್ಕೆ ಅವರು ನೀಡುವ ಮಹತ್ವವನ್ನು ವಿವರಿಸುತ್ತದೆ. ನಮ್ಮ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಮೋದಿ ಅಲ್ ನಹ್ಯಾನ್ ಅವರಿಗೆ ಟ್ಯಾಗ್ ಮಾಡಿ ಬರೆದಿದ್ದಾರೆ.


ಈ ಭೇಟಿ ಸಂಕ್ಷಿಪ್ತವಾಗಿದ್ದರೂ, ರಕ್ಷಣಾ, ವ್ಯಾಪಾರ, ಇಂಧನ ಮತ್ತು ಪ್ರಾದೇಶಿಕ ಭದ್ರತೆಯಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ವಿಸ್ತರಿಸುತ್ತಿರುವ ಮಧ್ಯೆ ರಾಜತಾಂತ್ರಿಕವಾಗಿ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ.

ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರ ಭಾರತಕ್ಕೆ ಅಧಿಕೃತ ಪ್ರವಾಸದ ಭಾಗವಾಗಿ ಈ ಭೇಟಿ ನಡೆದಿದೆ. ಯುಎಇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಮೂರನೇ ಅಧಿಕೃತ ಭೇಟಿ ಮತ್ತು ಕಳೆದ ದಶಕದಲ್ಲಿ ಅವರ ಐದನೇ ಭೇಟಿ ಇದಾಗಿದೆ.

ಪ್ರಧಾನಿ ಮೋದಿ ಶಿಷ್ಟಾಚಾರ ಮುರಿದು ವಿಮಾನ ನಿಲ್ದಾಣಕ್ಕೆ ತೆರಳಿ ದೇಶದ ಮುಖ್ಯಸ್ಥರನ್ನು ಭೇಟಿಯಾಗುವುದು ಹೊಸದೆನಲ್ಲ. ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಸೌದಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್, ಕತಾರ್‌ನ ಅಮೀರ್, ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಸೇರಿದಂತೆ ಹಲವು ಗಣ್ಯರನ್ನು ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಿದ್ದರು.

Share This Article