ಹೆಬ್ಬೆಟ್‌ ಗಿರಾಕಿ ಮೋದಿ ಎಂದ ಕೆಪಿಸಿಸಿ ಐಟಿ ಸೆಲ್‌ ವಿರುದ್ಧ ಡಿಕೆಶಿ ಗರಂ

Public TV
2 Min Read

– ವಿಷಾದ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್‌
– ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ʼಹೆಬ್ಬೆಟ್ ಗಿರಾಕಿ ಮೋದಿʼ ಎಂದು ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಿದ್ದ ಕಾಂಗ್ರೆಸ್ ಭಾರೀ ಆಕ್ರೋಶದ ನಂತರ ಎಚ್ಚೆತ್ತಿದೆ. ಹೆಬ್ಬೆಟ್ ಗಿರಾಕಿ ಮೋದಿ ಎಂದು ಬರೆಯಲಾಗಿದ್ದ ಎಲ್ಲ ಟ್ವೀಟ್‌ಗಳನ್ನು ಈಗ  ತನ್ನ ಖಾತೆಯಿಂದ ಡಿಲೀಟ್‌ ಮಾಡಿದೆ.

ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಟ್ವೀಟ್ ಆಗಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಈ ಟ್ವೀಟ್ ತೆಗೆದುಹಾಕಲು ಸೂಚನೆ ನೀಡಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಮಾದವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‍ನ ಟ್ವೀಟ್‍ಗೆ ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಯಡಿಯೂರಪ್ಪ ಇಡೀ ವಿಶ್ವವೇ ಮೋದಿಯವರನ್ನು ದೊಡ್ಡ ನಾಯಕ ಅಂತ ಒಪ್ಪಿಕೊಂಡಿದೆ. ಈ ಸಂದರ್ಭದಲ್ಲಿ ಇಂತಹ ಶಬ್ಧ ಬಳಕೆ ಕಾಂಗ್ರೆಸ್‍ನ ಸಂಸ್ಕೃತಿಯನ್ನು ತೋರಿಸಿಕೊಡುತ್ತದೆ. ಕೂಡಲೇ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದರು.

ಕಾಂಗ್ರೆಸ್‌ ಟ್ವೀಟ್‌ ಏನಿತ್ತು?
ಮೋದಿ ಅವರಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ, ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ. ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ.  ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ HDK ಯಾವ ಪ್ರಾತಿನಿಧ್ಯ ನೀಡಿದ್ದಾರೆ?: ಶ್ರೀನಿವಾಸ್ ಪ್ರಶ್ನೆ

#ಹೆಬ್ಬೆಟ್‍ಗಿರಾಕಿಮೋದಿಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು? ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ ಬಿಜೆಪಿ ಕರ್ನಾಟಕದ ನಾಯಕರಿಗಾದ ಹಂಚಿಕೆ ಎಷ್ಟು? ಸರ್ಕಾರದ ಆದಾಯ ಹೆಚ್ಚಿದಂತೆ, ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. #ಹೆಬ್ಬೆಟ್‍ಗಿರಾಕಿಮೋದಿ ಸರ್ಕಾರದ ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ?

ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ಮೋದಿ ಅವರು ಓದಲಿಲ್ಲ. ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ. #ಹೆಬ್ಬೆಟ್ಟುಗಿರಾಕಿಮೋದಿಯಿಂದ ದೇಶ ನರಳುತ್ತಿದೆ.

ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ 66, ಡೀಸೆಲ್ 55 ಕ್ಕೆ ದೊರಕುತ್ತಿತ್ತು. ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ #ಹೆಬ್ಬೆಟ್‍ಗಿರಾಕಿಮೋದಿ ಯಿಂದ ದೇಶ ನಲುಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *