– ಸೂಕ್ತ ಕಾರಣ ನೀಡದಿದ್ರೆ ಭಿಕಾರಿಸ್ತಾನಕ್ಕೆ 2 ದಶಲಕ್ಷ ಡಾಲರ್ ದಂಡ ಸಾಧ್ಯತೆ
ಇಸ್ಲಾಮಾಬಾದ್: 2026ರ ಟಿ20 ವಿಶ್ವಕಪ್ (T20 World Cup 2026) ಪಂದ್ಯಗಳನ್ನಾಡಲು ಭಾರತಕ್ಕೆ ಬರಲ್ಲ ಎಂದು ಕ್ಯಾತೆ ತೆಗೆದಿರುವ ಬಾಂಗ್ಲಾದೇಶಕ್ಕೆ ಈಗ ಪಾಕಿಸ್ತಾನ (Pakistan) ಬೆಂಬಲ ನೀಡಿದೆ. ಇದರ ಭಾಗವಾಗಿ ತನ್ನ ರಾಷ್ಟ್ರೀಯ ತಂಡಕ್ಕೆ ಟಿ20 ವಿಶ್ವಕಪ್ ಸಿದ್ಧತೆಗಳನ್ನ ನಿಲ್ಲಿಸುವಂತೆ ಸೂಚಿಸಿದೆ. ಜೊತೆಗೆ ವಿಶ್ವಕಪ್ ಟೂರ್ನಿಯಿಂದಲೇ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ.
ತನ್ನ ಲೀಗ್ ಪಂದ್ಯಗಳನ್ನ ಭಾರತಕ್ಕೆ (India) ಸ್ಥಳಾಂತರಿಸಬೇಕೆಂಬ ಬಾಂಗ್ಲಾ ಕ್ರಿಕೆಟ್ ಮಂಡಳಿಯ (BCB) ಬೇಡಿಕೆಯನ್ನ ಈಡೇರಿಸದಿದ್ದರೆ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ನಿಲ್ಲಿಸುವಂತೆ ಕ್ರಿಕೆಟ್ ಮಂಡಳಿ ಪಾಕ್ ತಂಡಕ್ಕೆ ಸೂಚಿಸಿದೆ. ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್ ನ್ಯೂಸ್ – ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಪಿಸಿಬಿ ಸೂಚನೆಯಂತೆ ಪಾಕ್ ರಾಷ್ಟ್ರೀಯ ತಂಡದ ಎಲ್ಲಾ ಸಿದ್ಧತೆಗಳನ್ನ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಶ್ರೀಲಂಕಾದಲ್ಲಿ ಸ್ಥಳಗಳು ಲಭ್ಯವಿಲ್ಲದಿದ್ದರೆ, ಬಾಂಗ್ಲಾದ ಲೀಗ್ ಪಂದ್ಯಗಳನ್ನು ತನ್ನ ದೇಶದಲ್ಲಿ ಆಯೋಜಿಸುವುದಾಗಿಯೂ ಪಾಕ್ ಹೇಳಿದೆ ಎಂದು ವರದಿಯಾಗಿದೆ.
ಬಾಂಗ್ಲಾ ಮತ್ತು ಪಾಕಿಸ್ತಾನ ಸರ್ಕಾರಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi), ಪಾಕಿಸ್ತಾನವು ಬಾಂಗ್ಲಾದೇಶದ ನಿರ್ಧಾರವನ್ನ ಸಂಪೂರ್ಣವಾಗಿ ಬೆಂಬಲಿಸುತ್ತಿದೆ. ಬೇರೆಡೆಗೆ ಪಂದ್ಯಗಳನ್ನು ಸ್ಥಳಾಂತರಿಸಬೇಕೆನ್ನುವ ಬಾಂಗ್ಲಾದ ಬೇಡಿಕೆ ಈಡೇರಿಸದಿದ್ದರೆ, ತಾನು ಕೂಡ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಸೂಕ್ತ ಕಾರಣ ನೀಡದಿದ್ರೆ 2 ದಶಲಕ್ಷ ಡಾಲರ್ ದಂಡ!
ಪಂದ್ಯದಿಂದ ಹಿಂದೆ ಸರಿಯುವುದಾಗಿ ಹೇಳಿರುವ ಪಾಕ್ ಕ್ರಿಕೆಟ್ ಮಂಡಳಿ, ಪಂದ್ಯದಿಂದ ಹಿಂದೆ ಸರಿಯಲು ಸೂಕ್ತ ಕಾರಣ ಕೊಡದಿದ್ದರೆ ಐಸಿಸಿ ನಿಯಮ ಉಲ್ಲಂಘನೆ ಅನ್ವಯ 2 ಮಿಲಿಯನ್ ಡಾಲರ್ ದಂಡ ಕೂಡ ಐಸಿಸಿ ವಿಧಿಸುವ ಸಾಧ್ಯತೆಯಿದೆ ಎಂದು ತನ್ನದೇ ಸರ್ಕಾರಕ್ಕೆ ಎಚ್ಚರಿಸಿದೆ.
ವಿವಾದ ಶುರುವಾಗಿದ್ದು ಇಲ್ಲಿಂದ…
ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನ ಐಪಿಎಲ್ನಿಂದ ಹೊರದಬ್ಬಿದ ಬಳಿಕ ಬಾಂಗ್ಲಾ ಈ ರೀತಿ ಕ್ಯಾತೆ ತೆಗೆದಿದೆ. ಭದ್ರತಾ ಕಾರಣಗಳನ್ನ ನೀಡಿ ತನ್ನ ಪಾಲಿನ ಪಂದ್ಯಗಳನ್ನ ನೆನೆಯ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದಿದೆ. ಇದನ್ನೂ ಓದಿ: ʻನನಗೆ ಸೂರ್ಯಕುಮಾರ್ ತುಂಬಾ ಮೆಸೇಜ್ ಕಳಿಸ್ತಿದ್ದʼ ಎಂದಿದ್ದ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!
ದಾಖಲೆ ಬೆಲೆಗೆ ಬಿಕರಿಯಾಗಿದ್ದ ಮುಸ್ತಾಫಿಜುರ್
2026ರ ಐಪಿಎಲ್ ಟೂರ್ನಿಗಾಗಿ ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್ ಫ್ರಾಂಚೈಸಿಯು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೂ ಮುಸ್ತಾಫಿಜುರ್ ಪಾತ್ರವಾಗಿದ್ದರು. ಆದ್ರೆ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್ನಲ್ಲಿ (IPL) ಆಡಬಾರದು ಎಂಬ ಆಕ್ರೋಶ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್ನಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚಿಸಿತ್ತು.
ಫೆಬ್ರವರಿಯಲ್ಲಿ ಟಿ20 ವಿಶ್ವಕಪ್
2026ರ ಟಿ20 ವಿಶ್ವಕಪ್ ಟೂರ್ನಿಯ ಹಕ್ಕು ಭಾರತದ್ದೇ ಆದರೂ ಶ್ರೀಲಂಕಾ ಜೊತೆಗಿನ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ. ಭಾರತ ಮತ್ತು ಪಾಕ್ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ, ಪಾಕಿಸ್ತಾನದ ಎಲ್ಲಾ ಪಂದ್ಯಗಳು ಲಂಕಾದಲ್ಲಿ ನಡೆಯಲಿದೆ. ಬಾಂಗ್ಲಾ ತಂಡವು ಫೆಬ್ರವರಿ 7 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ಅದೇ ಸಮಯಕ್ಕೆ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ನಡುವಿನ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಫೆ.9 ರಂದು ಇಟೇ ವಿರುದ್ಧ, ಫೆ.14 ರಂದು ಇಂಗ್ಲೆಂಡ್ ವಿರುದ್ಧ ಈಡನ್ ಗಾರ್ಡನ್ನಲ್ಲಿ ಹಾಗೂ ಅಂತಿಮ ಲೀಗ್ ಸುತ್ತಿನ ಪಂದ್ಯವನ್ನ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೇಪಾಳದ ವಿರುದ್ಧ ಆಡಬೇಕಿದೆ.




