ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಬಿಜೆಪಿ ನಾಯಕರ ಅಸಮಾಧಾನ

By
3 Min Read

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಸೋಲಿನ ಬಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯರೂಪ್ಪ ನೇತೃತ್ವದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ಹೊರ ಹೊಮ್ಮಿದೆ.

ಗುಂಡ್ಲಪೇಟೆ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇತ್ತು. ಆದರೆ ಗೀತಾ ಮಹದೇವ್ ಪ್ರಸಾದ್ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಗೀತಾ ಅವರ ಪರ ಅನುಕಂಪ ಇರುವಾಗ ಇಂಥಹ ಹೇಳಿಕೆ ಬಿಜೆಪಿಗೆ ಸಾಕಷ್ಟು ಹಿನ್ನೆಡೆ ಉಂಟುಮಾಡಿತು. ಅಷ್ಟೇ ಅಲ್ಲದೇ ಪ್ರತಾಪ್ ಸಿಂಹ ಹೇಳಿಕೆಗೆ ಬಿಜೆಪಿ ಮುಖಂಡರಿಂದಲೇ ಖಂಡನೆ ವ್ಯಕ್ತವಾಯಿತು ಎಂದು ಪಬ್ಲಿಕ್ ಟಿವಿಗೆ ಮೂಲಗಳು ಮಾಹಿತಿ ನೀಡಿವೆ.

ಅಧಿಕಾರ ದುರುಪಯೋಗ: ಆತ್ಮಾವಲೋಕನ ಸಭೆ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಹಣದ ಹೊಳೆ ಹರಿಸಿದ ನಾಯಕರು ಮತದಾರರ ಖರೀದಿ ಮಾಡುವ ಮೂಲಕ ಅಕ್ರಮ ನಡೆಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಮಿಷನ್ 150 ಗುರಿ ಇಟ್ಟುಕೊಂಡು ಮುನ್ನಡೆಯುತ್ತೇವೆ. ಕೇಂದ್ರ ಬಿಜೆಪಿ ಸಾಧನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಲಿಂಬಾವಳಿ ಹೇಳಿದರು.

ಸಭೆಯಲ್ಲಿ ಯಾರಿದ್ದರು: ಆತ್ಮಾವಲೋಕನ ಸಭೆಯಲ್ಲಿ ಅಭ್ಯರ್ಥಿಗಳಾಗಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ನಿರಂಜನ್, ಚುನಾವಣಾ ಉಸ್ತುವಾರಿ ಹೊತ್ತಿದ್ದ ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ, ಚುನಾವಣಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಬಿಜೆಪಿ ಮುಖಂಡರಾದ ಮಾಜಿ ಸಚಿವ ರಾಮದಾಸ್, ಉದಾಸಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಮೇಲ್ಮನೆ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್, ತಾರಾ ಅನುರಾಧ, ಶೃತಿ, ನಂಜನಗೂಡು, ಗುಂಡ್ಲುಪೇಟೆ ಪಕ್ಷದ ಮುಖಂಡರು ಭಾಗಿಯಾಗಿದ್ದರು.

ನಾಯಕರು ಗೈರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಸಂಸದ ಪ್ರತಾಪ ಸಿಂಹ ಗೈರಾಗಿದ್ದರು.

ಪ್ರತಾಪ್ ಸಿಂಹ ಹೇಳಿದ್ದು ಏನು?
ಮಾಜಿ ಸಚಿವ ದಿವಂಗತ ಮಹದೇವ್ ಪ್ರಸಾದ್ ಅವರ ಪತ್ನಿ ಗೀತಾ ಅವರ ವಿರುದ್ಧ ಪ್ರತಾಪ್ ಸಿಂಹ,”ಗೀತಾ ಮಹಾದೇವ್ ಪ್ರಸಾದ್ ಅವರೇ ನಿಮ್ಮ ಪತಿ ಮೃತಪಟ್ಟು ಹಾಲು ತುಪ್ಪ ಬಿಡೋ ದಿನವೇ ನಿವೇ ಅಭ್ಯರ್ಥಿ ಎಂಬುದಾಗಿ ಘೋಷಿಸಿಕೊಂಡಿದ್ದೀರಿ. ನಿಮ್ಮ ಮನೆಯ ಅಭಿವೃದ್ಧಿಗೆ ಮತ ಕೇಳಬೇಡಿ” ಎಂದು ಹೇಳಿಕೆ ನೀಡಿದ್ದರು. ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ನಿಮಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ, ಹೇಳಿಕೆಯನ್ನೂ ಹಿಂಪಡೆಯುತ್ತೇನೆ. ರಾಜಕಾರಣಿಗಳು ಮೃತಪಟ್ಟಾಗ ಅವರ ಮನೆಯವರನ್ನು ಚುನಾವಣೆಗೆ ನಿಲ್ಲಿಸಿ ಅನುಕಂಪದ ಆಧಾರದಲ್ಲಿ ಮತ ಪಡೆಯಲಾಗುತ್ತದೆ. ನೋವಿಗಿಂತ ಅಧಿಕಾರವೇ ಮುಖ್ಯವಾಯಿತೇ ಎಂದು ಪ್ರಶ್ನಿಸಿದ್ದೆ. ಅದರಾಚೆಗೆ ನನ್ನ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದರು.

ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿಕ್ರಿಯಿಸಿದ್ದ ಗೀತಾ ಮಹಾದೇವ್ ಪ್ರಸಾದ್, ನಾನು ಗೆಲುವನ್ನು ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಯಂತೆ ಜಯಗಳಿಸಿದ್ದೇನೆ. ಸಂಸದ ಪ್ರತಾಪ್ ಸಿಂಹ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ನನ್ನ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯು ಸಹ ನನ್ನ ಜಯಕ್ಕೆ ಕಾರಣ. ಸಂಸದರಾಗಿ ಅವರು ಒಬ್ಬ ಮಹಿಳೆಯ ಬಗ್ಗೆ ಈ ರೀತಿಯಾಗಿ ಮಾತಾಡಿದರೆ ಯಾರೂ ಕ್ಷಮಿಸುವುದಿಲ್ಲ. ಕೇವಲ ಮಹಿಳೆಯರಷ್ಟೇ ಅಲ್ಲದೇ ಪುರಷರು ಸಹ ಇದನ್ನು ಖಂಡಿಸುತ್ತಾರೆ. ಪ್ರತಾಪ್ ಸಿಂಹ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳುವ ಮೂಲಕ ಸಂಸದರಿಗೆ ಟಾಂಗ್ ನೀಡಿದ್ದರು.

ಜನರು ನನ್ನ ಮೇಲೆ ನಂಬಿಕೆಯಿಟ್ಟು, ಗಲ್ಲಿಸಿದ್ದಾರೆ. ಮುಂದೆ ನಾನು ಮಹಾದೇವ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ. ಪ್ರತಾಪ್ ಸಿಂಹ ತಮ್ಮ ಹೇಳಿಕೆಯಿಂದ ಸುಮಾರು 40 ಸಾವಿರ ಮತಗಳನ್ನು ಕಳೆದುಕೊಂಡಿದ್ದಾರೆ. ಜಯದ ಸಮಯದಲ್ಲಿ ಪ್ರತಾಪ್ ಸಿಂಹ ಅವರನ್ನು ಕ್ಷಮಿಸುತ್ತೇನೆ. ತಮ್ಮ ವಿವಾದಾತ್ಮಕ ಹೇಳಿಕೆ ನಂತರ ನನ್ನ ಮಗನಿಗೆ ಫೋನ್ ಮಾಡಿ ಕ್ಷಮೆ ಕೇಳಿದ್ದರು. ಇಂದು ನಿಮ್ಮ ಮಾಧ್ಯಮಗಳ ಮುಖಾಂತರ ಅವರನ್ನು ಕ್ಷಮಿಸಿದ್ದೇನೆ ಎಂದು ತಿಳಿಸುತ್ತೇನೆ ಎಂದು ಅವರು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *