ವಿಚ್ಛೇದನ ಬಯಸಿದ ಬಳಿಕವೂ ಪತಿಯಿಂದಲೇ ಮಗು ಬೇಕು ಯಾಕೆ – ತನ್ನ ಉದ್ದೇಶವನ್ನು ತಿಳಿಸಿದ ಮಹಿಳೆ

Public TV
2 Min Read

ಮುಂಬೈ: ವಿಚ್ಛೇದನಕ್ಕೆ ಅರ್ಜಿ ಹಾಕಿದ ಬಳಿಕ ಪತಿಯಿಂದ ಮಗುಬೇಕು ಎಂದು ಕೋರ್ಟ್ ಮೇಟ್ಟಿಲೇರಿದ್ದ ನಾಂದೇಡ್ ಮಹಿಳೆ ತನ್ನ ಈ ನಿರ್ಧಾರದ ಹಿಂದಿನ ಉದ್ದೇಶವೇನು ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಪತಿ ಜೊತೆ ಬಾಳಲು ಸಾಧ್ಯವಿಲ್ಲ ಎಂದು 35 ವರ್ಷದ ವೈದ್ಯೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆದರೆ ಬಳಿಕ ಪತಿಯಿಂದಲೇ ಐವಿಎಫ್(ಇನ್-ವಿಟ್ರೋ ಫಲೀಕರಣ) ವಿಧಾನದ ಮೂಲಕ ಮಗು ಪಡೆಯಲು ಅವಕಾಶ ನೀಡುವಂತೆ ನಾಂದೇಡ್ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದು, ಈ ಮನವಿಗೆ ಕೋರ್ಟ್ ಅನುಮತಿ ಕೂಡ ನೀಡಿತ್ತು.

ಈ ಬಗ್ಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ವೈದ್ಯೆ ತಾನು ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎನ್ನುವುದನ್ನು ತಿಳಿಸಿದ್ದಾರೆ. ವೃತ್ತಿಯಲ್ಲಿ ದಂಪತಿ ವೈದ್ಯರಾಗಿದ್ದು, ಇವರಿಗೆ ಮಗ ಕೂಡ ಇದ್ದಾನೆ. ಒಡಹುಟ್ಟಿದವರಿಲ್ಲದೆ ತಮ್ಮ ಮಗ ಒಬ್ಬಂಟಿಯಾಗಿ ಬೆಳೆಯಬಾರದು ಎಂದು ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಪತಿಯಿಂದ ಮಗುವನ್ನು ಅಪೇಕ್ಷಿಸಿದೆ ಎಂದು ಹೇಳಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು 2015-16ರ ಮಧ್ಯೆ ಎರಡು ಭಾರಿ ಗರ್ಭಿಣಿಯಾದಾಗಲೂ ಪತಿ ಮಾತಿಗೆ ಮರುಳಾಗಿ ನಾನು ಗರ್ಭಪಾತ ಮಾಡಿಸಿದ್ದೆ. ಬಳಿಕ ಮಗನಿಗೆ ಮೂರು ವರ್ಷ ತುಂಬಿದ ಬಳಿಕ ಮತ್ತೊಂದು ಮಗು ಬೇಕೆಂದು ಪತಿ ಬಳಿ ಹೇಳಲು ಹಿಂಜರಿದೆ. ನನ್ನ ಪತಿಗೆ ಯಾರು ಒಡೆಹುಟ್ಟಿದವರಿಲ್ಲ. ಅದೇ ವಾತಾವರಣದಲ್ಲಿ ನನ್ನ ಮಗ ಕೂಡ ಬೆಳೆಯುವುದು ನನಗೆ ಇಷ್ಟವಿಲ್ಲ. ಹೀಗಾಗಿ ನನಗೆ ಮತ್ತೊಂದು ಮಗು ಬೇಕು ಎಂದು ಅನಿಸಿದೆ ಎಂದು ತಿಳಿಸಿದರು.

ನನಗೆ ಈಗಾಗಲೇ 35 ವರ್ಷ ಆಗಿಬಿಟ್ಟಿದೆ. ವಯಸ್ಸು ಮೀರಿದರೆ ಮಕ್ಕಳಾಗುವುದು ಕಷ್ಟ. ಅಷ್ಟೇ ಅಲ್ಲದೆ ನನಗೆ ಮತ್ತೊಂದು ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ನಾನು ಪತಿಯಿಂದ ವಿಚ್ಛೇದನ ಪಡೆಯಲು ಬಯಸಿದ ಮೇಲೂ ಐವಿಎಫ್ ವಿಧಾನದ ಮೂಲಕ ಅವರಿಂದ ಮಗು ಪಡೆಯಲು ಕೋರ್ಟ್‍ಗೆ ಅನುಮತಿ ಕೇಳಿದೆ. ಪತಿ ನನ್ನ ನಿರ್ಧಾರಕ್ಕೆ ಸಹಕರಿಸಿದರೆ ಅವರ ಮೇಲೆ ಹಾಕಿರುವ ವರದಕ್ಷಿಣೆ ಕೇಸ್ ಹಾಗೂ ಕಿರುಕುಳದ ಕೇಸ್ ಹಿಂದಕ್ಕೆ ಪಡೆಯುತ್ತೇನೆ ಎಂದು ವೈದ್ಯೆ ಸ್ಪಷ್ಟನೆ ನೀಡಿದರು.

ದಂಪತಿ 2017ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್‍ನಲ್ಲಿ ವಿಚಾರಣೆ ನಡೆಯುವಾಗಲೇ ಪತಿಯಿಂದ ಮಗು ಬೇಕು ಎಂಬ ಕಾರಣಕ್ಕೆ 2018ರಲ್ಲೇ ಪತ್ನಿ ಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿದ್ದು, ಮಹಿಳೆ ಸಂತಾನ ಪಡೆಯುವ ಹಕ್ಕಿದೆ. ಇದು ಮನುಷ್ಯನ ಮೂಲ ನಾಗರಿಕ ಹಕ್ಕು ಎಂದು ಪರಿಗಣಿಸಿ ಮಹಿಳೆ ಮನವಿಯನ್ನು ಕೋರ್ಟ್ ಸಮ್ಮತಿಸಿದೆ.

ಈ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಕಾನೂನುನಲ್ಲಿ ಯಾವುದೇ ಪ್ರಸ್ತಾವ ಇಲ್ಲದಿರುವ ಕಾರಣಕ್ಕೆ ಕೋರ್ಟ್ ಅಂತಾರಾಷ್ಟ್ರೀಯ ಕಾನೂನುಗಳ ಮೊರೆ ಹೋಗಿತ್ತು. ಅಷ್ಟೇ ಅಲ್ಲದೆ ಜೂನ್ 24ರ ಒಳಗೆ ಆಪ್ತ ಸಲಹೆಗಾರರ ನೆರವಿನಿಂದ ಐವಿಎಫ್ ಪರಿಣಿತರನ್ನು ಭೇಟಿ ಮಾಡಿ ಎಂದು ನ್ಯಾಯಾಲಯ ದಂಪತಿಗೆ ಸೂಚಿಸಿದೆ ಎನ್ನಲಾಗಿದೆ.

ಪತ್ನಿಯ ಆಗ್ರಹವನ್ನು ಪತಿ ವಿರೋಧಿಸಿದ್ದು, ಸಾಮಾಜಿಕ ನಿಯಮಗಳಿಗೆ ಇದು ವಿರುದ್ಧವಾಗಿದೆ. ಅಷ್ಟೇ ಅಲ್ಲದೆ ಇದು ಅಕ್ರಮವೆಂದು ವಾದಿಸಿದ್ದಾರೆ. ಆದರೆ ಕೋರ್ಟ್ ಪತಿ ವಾದವನ್ನು ನಿರಾಕರಿಸಿದ್ದರಿಂದ, ಪತಿ ಅನಿವಾರ್ಯವಾಗಿ ವೀರ್ಯದಾನ ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *