ಒಳಿತು ಮಾಡು ಮನುಸ. ನೀ ಇರೋದೆ ಮೂರು ದಿವಸ ಎಂಬ ಹಾಡನ್ನು ಬರೆಯುವ ಮೂಲಕ ವಿಶ್ವದಾದ್ಯಂತ ಇರುವ ಕನ್ನಡಿಗರ ಮನ ಗೆದ್ದಿರುವ ನಮ್ ಋಷಿ (Nam Rushi), ಈಗ ರಾಮ್ ರಹೀಮ್ (Ram Rahim) ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಫೆಬ್ರವರಿಯಲ್ಲಿ ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಚಿತ್ರದ ಶೋ ರೀಲ್ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಮ್ ಋಷಿ ಮಾತನಾಡಿದರು.
ಶೋ ರೀಲ್‌ನಲ್ಲಿ ‘ಯಾರೂ ಸಿನಿಮಾ ನೋಡಬೇಡಿ’ ಎಂದು ಹೇಳಿದ್ದೇನೆ. ಅದಕ್ಕೆ ಕಾರಣವೂ ಇದೆ. ಇದು ಯಾವುದೇ ಗಿಮಿಕ್ ಅಲ್ಲ. ಅದಕ್ಕೆ ಕಾರಣವನ್ನು ಬಿಡುಗಡೆಯ ದಿನ ನಾನೇ ತಿಳಿಸುತ್ತೇನೆ ಎಂದು ಹೇಳಿ ಮಾತು ಮುಂದುವರೆಸಿದ ನಮ್ ಋಷಿ, ಈಗ ಸಿನಿಮಾ ಮಾಡುವುದು ಕಷ್ಟ. ಮಾಡಿದರೂ ತೆರೆಗೆ ತರುವುದು ಇನ್ನೂ ಕಷ್ಟ. ಹಾಗಾಗಿ, ಈ ಚಿತ್ರವನ್ನು ಸುಮಾರು ಅರವತ್ತು ಲಕ್ಷ ಖರ್ಚು ಮಾಡಿ ನಾನೇ ವಿತರಣೆ ಮಾಡುತ್ತೇನೆ. ಯಾರ ಬಳಿಯೂ ವಿತರಣೆ ಮಾಡಿ ಅಂತ ಕೇಳುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಚಿತ್ರದ ಟೀಸರ್ , ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಆದರೆ ನಾನು ಆದರೆ 11 ನಿಮಿಷ 22 ಸೆಕೆಂಡ್ ಅವಧಿಯ ಶೋ ರೀಲ್ ಅನ್ನು ನಮ್ ಋಷಿ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದೇನೆ. ಎಲ್ಲರೂ ಟ್ರೇಲರ್ ಹಾಗೂ ಟೀಸರ್ ಬಿಡುಗಡೆ ಮಾಡುತ್ತಾರೆ. ನನಗೆ ತಿಳಿದ ಹಾಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಶೋ ರೀಲ್ ಬಿಡುಗಡೆ ಮಾಡಿರುವುದು. ಶೋ ರೀಲ್‌ನಲ್ಲಿ ಕೆಲವು ಸಂಗತಿಗಳನ್ನು ಹೇಳಿದ್ದೇನೆ. ಬಳಸಿರುವ ಭಾಷೆ, ಹೇಳಿರುವ ರೀತಿ ಕೆಲವರಿಗೆ ಇಷ್ಟವಾಗಬಹುದು. ಕೆಲವರಿಗೆ ಇಷ್ಟ ಆಗದೆ ಇರಬಹುದು. ಇದನ್ನೂ ಓದಿ: ‘ಜನನಾಯಗನ್’ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್ – UA ಸರ್ಟಿಫಿಕೇಟ್ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ
ರಾಮ್ ರಹೀಮ್ ಎರಡು ವರ್ಷಗಳ ಹಿಂದೆ ಆರಂಭವಾದ ಚಿತ್ರ. ಈಗ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಇದೊಂದು ಒಬ್ಬ ಹಿಂದೂ ಹುಡುಗ, ಒಬ್ಬ ಮುಸ್ಲಿಂ ಹುಡುಗ ಹಾಗೂ ಹಿಂದೂ ಹುಡುಗಿ ಮೂರು ಜನರ ನಡುವೆ ನಡೆಯುವ ತ್ರಿಕೋನ ಪ್ರೇಮಕಥೆ. ಇದೊಂದು ಕೌಟುಂಬಿಕ ಚಿತ್ರ ಕೂಡ. ಆದರೂ ನಾನು ಈ ಚಿತ್ರವನ್ನು ನೋಡಬೇಡಿ ಎಂದು ಶೋ ರೀಲ್‌ನಲ್ಲಿ ಹೇಳಿದ್ದೇನೆ. ನಾನು ಯಾಕೆ ಹೇಳಿದ್ದೀನಿ ಅಂತ ಸಿನಿಮಾ ನೋಡಿದವರಿಗೆ ತಿಳಿಯುತ್ತದೆ. ಬಿಡುಗಡೆ ದಿನವೇ ನಾನು ಯಾಕೆ ಹೀಗೆ ಹೇಳಿದೆ ಎನ್ನುವುದಕ್ಕೆ ಕಾರಣ ಹೇಳುತ್ತೇನೆ ಎಂದು ನಮ್ ಋಷಿ ಪುನರುಚ್ಚರಿಸಿದರು.
ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ನೃತ್ಯ ನಿರ್ದೇಶನ, ಸಾಹಸ ನಿರ್ದೇಶನ, ನಿರ್ಮಾಣ ಹಾಗೂ ನಾನೇ ಮಾಡಿದ್ದೀನಿ ಎಂದು ತಿಳಿಸಿದ ನಮ್ ಋಷಿ, ‘ರಾಮ್ ರಹೀಮ್’ ಚಿತ್ರದಲ್ಲಿ ಅರುಣ್ ಕ್ಯಾದಿಗೆರ. ಕಿರಣ್ ಈಡಿಗ, ರಾಜೇಶ್ವರಿ, ಅಮರೇಶ್ ಮಲ್ಲಾಪುರ, ಎಸ್ ಟಿ ಸೋಮಶೇಖರ್, ಬಂಡೇಶ್ ನಾಯಕ ಮುಂತಾದವರು ಅಭಿನಯಿಸಿದ್ದಾರೆ. ಈವರೆಗೂ ಯಾವ ಚಿತ್ರದಲ್ಲೂ ಅಭಿನಯಿಸದ ಬಹುತೇಕ ಹೊಸ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತ್ತೆ ಜೊತೆಯಾದ ಎಸ್.ಮಹೇಂದರ್, ನಾದಬ್ರಹ್ಮ ಹಂಸಲೇಖ


