ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲ: ಕಟೀಲ್ ವಾಗ್ದಾಳಿ

Public TV
4 Min Read

ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ತಲುಪಿದೆ. ಜನರಿಟ್ಟ ನಂಬಿಕೆ, ವಿಶ್ವಾಸಕ್ಕೆ ಈ ಸರ್ಕಾರ ದ್ರೋಹ ಬಗೆದಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್ ಕಟೀಲ್ (Nalin Kumar Kateel) ಟೀಕಿಸಿದರು.

ನಗರದಲ್ಲಿ ಮಂಗಳವಾರ ರಾಜ್ಯ ಕಾಂಗ್ರೆಸ್ ಸರ್ಕಾರದ 100 ದಿನಗಳ ಆಡಳಿತ ಕುರಿತ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಗ್ಯಾರಂಟಿಗಳ ಘೋಷಣೆ ಮಾಡಿತ್ತು. ಭ್ರಷ್ಟಾಚಾರದ ವಿರುದ್ಧ ಪುಂಖಾನುಪುಂಖ ಭಾಷಣ ಮಾಡಿದ್ದರು. ಅಧಿಕಾರಕ್ಕೆ ಬಂದ ಬಳಿಕ 100 ದಿನಗಳಲ್ಲಿ ನೂರಾರು ತಪ್ಪುಗಳನ್ನು ಈ ಸರ್ಕಾರ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಮಾನದಂಡಗಳನ್ನು ವಿಧಿಸಿ ಇವತ್ತು ಈ ಸರ್ಕಾರ ಮಾತು ತಪ್ಪಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: CWRC ಶಿಫಾರಸ್ಸು ಎತ್ತಿ ಹಿಡಿದ CWMA – ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಸಾಧ್ಯತೆ

ಇಬ್ಬರು ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಅವರ ರಾಜೀನಾಮೆ ಪಡೆಯುವುದರಲ್ಲೂ ವಿಫಲವಾಗಿದೆ. ನಮ್ಮ ಆಡಳಿತ ಇದ್ದಾಗ, ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಗರಿಷ್ಠ ಬಂಡವಾಳ ಹೂಡಿಕೆ ಬರುತ್ತಿತ್ತು. ಇವತ್ತು ವಿದ್ಯುತ್ ಅಭಾವ, ಅತಿ ಹೆಚ್ಚು ದರದಿಂದ ಹೂಡಿಕೆದಾರರು ವಾಪಸ್ ಹೋಗುತ್ತಿದ್ದಾರೆ. ಒಂದೆಡೆ ವಿದ್ಯುತ್ ಉಚಿತವೆಂದು ಘೋಷಿಸಿ ಅಘೋಷಿತ ವಿದ್ಯುತ್ ಕಡಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಳೆ ಇಲ್ಲ: ರೈತರು ಗಂಟೆಗಟ್ಟಲೆ ಕಾದು ಪಂಪುಗಳನ್ನು ಚಾಲನೆ ಮಾಡುವ ಸ್ಥಿತಿ ಬಂದಿದೆ. ವಿದ್ಯುತ್ ಅಭಾವ ಕಾಡುತ್ತಿದೆ. ಬಜೆಟ್‍ನಲ್ಲಿ ರೈತಪರ ಯೋಜನೆಗಳನ್ನು ಈ ಸರ್ಕಾರ ಘೋಷಿಸಿಲ್ಲ. ರೈತ ಸಮ್ಮಾನ್ ಯೋಜನೆಯಡಿ ಕೇಂದ್ರದ ಮೋದಿಜಿ ಸರ್ಕಾರ 6 ಸಾವಿರ ಮತ್ತು ಯಡಿಯೂರಪ್ಪ- ಬೊಮ್ಮಾಯಿಯವರ ಸರ್ಕಾರಗಳು 4 ಸಾವಿರ ನೀಡುತ್ತಿದ್ದವು. 4 ಸಾವಿರ ನೀಡುವುದನ್ನು ಈ ಸರ್ಕಾರ ರದ್ದು ಮಾಡಿದೆ ಎಂದು ವಿವರಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಯಾವಾಗಾದ್ರೂ ಮಾಡಲಿ, ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ: ಹೆಚ್‌ಕೆ ಪಾಟೀಲ್

ಬೊಮ್ಮಾಯಿಯವರ ದೂರದೃಷ್ಟಿಯ ಯೋಜನೆ ರೈತ ವಿದ್ಯಾನಿಧಿಗೆ ಕತ್ತರಿ ಹಾಕಿದ ರೈತ ವಿರೋಧಿ ಸರ್ಕಾರ ರಾಜ್ಯದ್ದು. ಪಂಚಾಯಿತಿ ಕಚೇರಿಯಿಂದ ಸಿಎಂ ಕಚೇರಿವರೆಗೆ ಭ್ರಷ್ಟಾಚಾರ ಇವತ್ತು ಸದ್ದು ಮಾಡುತ್ತಿದೆ. ಸಿಎಂ ಕಚೇರಿ ಭ್ರಷ್ಟಾಚಾರದ ಬಗ್ಗೆ ಅವರ ಶಾಸಕರೇ ಹೇಳುತ್ತಿದ್ದಾರೆ. ಹಿಂದಿನಿಂದ 2 ಶಕ್ತಿಗಳು ಮುಖ್ಯಮಂತ್ರಿಗಳನ್ನು ನಿಯಂತ್ರಿಸುವ ಬಗ್ಗೆ ಅವರ ಪಕ್ಷದವರೇ ಹೇಳುತ್ತಾರೆ. ಈ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ಸರ್ಕಾರದ ಕಾನೂನುಗಳನ್ನು ರದ್ದು ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಬೊಮ್ಮಾಯಿಯವರ ಸರ್ಕಾರದ ಯೋಜನೆಗಳನ್ನು ನಿಲ್ಲಿಸುವ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪ ಹೊರಿಸಿ ಕೇಸು ದಾಖಲಿಸಿ ಜೈಲಿಗೆ ಹಾಕುವ ಕೆಲಸ ನಡೆದಿದೆ ಎಂದು ಗರಂ ಆದರು.

ಸೋಷಿಯಲ್ ಮೀಡಿಯಾದಲ್ಲಿ ಬರೆದವರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಮಾಧ್ಯಮದವರ ಮೇಲೂ ದಬ್ಬಾಳಿಕೆ ನಡೆದಿದೆ. ಇದು ಹಿಂದಿನ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲೂ ಈ ಸರ್ಕಾರ ಸೋತಿದೆ. ಹತ್ತಾರು ಕೊಲೆ ನಡೆದಿದೆ. ಜೈನ ಮುನಿ ಹತ್ಯೆಯಾಗಿದೆ. ಹಿಂದೂ ಜಾಗರಣ ವೇದಿಕೆ ಪ್ರಮುಖರ ಕೊಲೆಯಾಗಿದೆ. ಉಡುಪಿ ಘಟನೆಯನ್ನು ಕ್ಷುಲ್ಲಕವಾಗಿ ಗೃಹಸಚಿವರು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನವೆಂಬರ್ 5 ಕೆ-ಸೆಟ್ ಪರೀಕ್ಷೆ: ಕೆಇಎ

ಸರ್ವಾಧಿಕಾರ ಧೋರಣೆಯ ಸರ್ಕಾರ ಇಲ್ಲಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಕ್ಕೆ ಅಂಕುಶ, ವಾಕ್ ಸ್ವಾತಂತ್ರ್ಯಕ್ಕೆ ದಮನ ನೀತಿ ಪ್ರಾರಂಭವಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳದ ಭರವಸೆ ಈಡೇರಿಲ್ಲ. ಸಮರ್ಪಕವಾಗಿ ವೇತನ ನೀಡಲಾಗದ ಸ್ಥಿತಿ ಸರ್ಕಾರದ್ದು. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹಿಂದೆ ನೀಡಿದ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ. 3 ತಿಂಗಳುಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಆಗಿಲ್ಲ. ಕೈ ಕೊಟ್ಟ ಯೋಜನೆಗಳು, ಹಳಿ ತಪ್ಪಿದ ಆಡಳಿತದ ಕುರಿತು ಜನರ ಮುಂದೆ ಮಾಹಿತಿ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರ ಇಳಿಕೆಗೆ ಅಭಿನಂದನೆ: ಗೃಹಬಳಕೆಯ 14 ಕೆಜಿ ಎಲ್‍ಪಿಜಿ ಸಿಲಿಂಡರ್ ದರವನ್ನು 200 ರೂಪಾಯಿ ಇಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈ ನಿರ್ಧಾರದಿಂದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ. ಈ ಕುರಿತು ನಿರ್ಧರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧನ್ಯವಾದ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಈಗಾಗಲೇ 200 ರೂ. ನೆರವು ಲಭಿಸುತ್ತಿದ್ದು, ಈಗ 400 ರೂ. ಬೆಲೆ ಇಳಿಕೆ ಆಗಲಿದೆ. ಅಲ್ಲದೆ ಹೊಸದಾಗಿ 75 ಲಕ್ಷ ಉಜ್ವಲ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡುವ ಕ್ರಮ ಸ್ವಾಗತಾರ್ಹ. ಹೊಗೆರಹಿತ ಅಡುಗೆ ಸಂಬಂಧ ಕೇಂದ್ರದ ಕ್ರಮ ಅತ್ಯಂತ ಸ್ವಾಗತಾರ್ಹ ಎಂದು ಬಣ್ಣಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋವಿಂದ ಕಾರಜೋಳ, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್