ಸಿದ್ದರಾಮಯ್ಯ ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆ: ಕಟೀಲ್ ವ್ಯಂಗ್ಯ

Public TV
2 Min Read

– ಬಿಎಸ್‌ವೈ ಆಡಿಯೋ ರಿಲೀಸ್ ಮಾಡಿದ್ದೇ ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಲೀಕ್ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಕಟೀಲ್ ಅವರು, ಈ ಆಡಿಯೋವನ್ನು ಸಿದ್ದರಾಮಯ್ಯನವರೇ ರಿಲೀಸ್ ಮಾಡಿದ್ದಾರೆ. ಈ ಹಿಂದೆಯೂ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು ಮಾತನಾಡಿದ್ದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಅವರಿಗೆ ಮುಖ್ಯಮಂತ್ರಿ ಆಗುವ ಆಸೆ. ಅದಕ್ಕಾಗಿಯೇ ಇಂತಹ ಪ್ರಯೋಗಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯ ಆಂತರಿಕ ಸಭೆಯಲ್ಲಿ ಮಾಡಿದ ಆಡಿಯೋ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಎಲ್ಲವನ್ನೂ ಹೊರಗೆ ತರುತ್ತೇವೆ. ಆದರೆ ಈ ವಿಚಾರವಾಗಿ ಬಿಜೆಪಿ ತಲೆ ಕೆಡಿಸಿಕೊಂಡಿಲ್ಲ. ಇಂತಹ ಪ್ರಯೋಗ ಮಾಡಿದ ಸಿದ್ದರಾಮಯ್ಯ ಅವರ ಸ್ಥಿತಿ ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆ. ಬಿಜೆಪಿ ಸರ್ಕಾರ ಬಿದ್ದರೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರು ಅಂದುಕೊಂಡಿದ್ದಾರೆ. ಇದು ಅವರ ಹಗಲುಗನಸು ಎಂದು ಕುಟುಕಿದರು.

ಬಿಎಸ್‌ವೈ ಆಡಿಯೋ ವಿರುದ್ಧ ಕಾಂಗ್ರೆಸ್ ಕಾನೂನು ಸಮರ ಮಾಡಲಿ. ಸಿದ್ದರಾಮಯ್ಯ ಅವರು ಕಾನೂನನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಸುಳ್ಳು ಪ್ರಚಾರ ಮಾಡಲು ಹೊರಟಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಬಿ.ಎಸ್.ಯಡಿಯೂರಪ್ಪನವರ ಆಡಿಯೋ ಮಾಡಿದ್ದು ಬಿಜೆಪಿಯವರೇ ಅಂತ ಸ್ಪಷ್ಟವಾಗಿಲ್ಲ. ಪಕ್ಷದ ಕಡೆಯಿಂದ ಆಡಿಯೋ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಬಗ್ಗೆ ಮಂಗಳೂರು ದರ್ಶನ ಪುಸ್ತಕ ಮಾಡಲಾಗಿತ್ತು. ಆ ಪುಸ್ತಕದಲ್ಲಿ ಟಿಪ್ಪು ಸಾವಿರಾರು ಕ್ರೈಸ್ತರನ್ನು ಹತ್ಯೆ ಮಾಡಿದ್ದಾನೆ. ಹೀಗಾಗಿ ಆತ ಕ್ರೂರಿ, ನೆತ್ತರು ಹರಿಸಿದವ ಅಂತ ಮಾಹಿತಿ ಇದೆ. ಇದೊಂದೆ ವಿಚಾರ ಅಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿ ಎಲ್ಲವೂ ದ್ವಂದ್ವ ಇದೆ. ಇಂತಹ ನಿಲುವುಗಳ ಮೂಲಕ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ 100 ದಿನಗಳು ಪೂರೈಸಿದ್ದಕ್ಕೆ ಸಿದ್ದರಾಮಯ್ಯನವರು ಟೀಕೆ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ ಕಟೀಲ್ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ 100 ದಿನಗಳ ಪೂರೈಸಿದ್ದಾಗ ಅನೇಕ ಕೊಲೆಗಳಾಗಿದ್ದವು. ಮಂಗಳೂರಿಗೆ ಸಿದ್ದರಾಮಯ್ಯ ಬರುತ್ತಿದ್ದಾರೆ ಅಂತ ಶರತ್ ಮಡಿವಾಳರ ಮೃತದೇಹ ಮುಚ್ಚಿಡಲಾಗಿತ್ತು. ಮಂಗಳೂರಿನಿಂದ ತೆರಳಿದ ಬಳಿಕ ಮೃತದೇಹ ಹೊರಗೆ ತರಲಾಗಿತ್ತು ಎಂದು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *