ವಿಮಾನಯಾನ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ – ಆರೋಪಿ ಅರೆಸ್ಟ್‌

Public TV
1 Min Read

ಮುಂಬೈ: ವಿಮಾನಯಾನ ಸಂಸ್ಥೆಗಳು ಮತ್ತು ಹೋಟೆಲ್‌ಗಳಿಗೆ ನಕಲಿ ಬಾಂಬ್ ಬೆದರಿಕೆಗಳ ಹಿಂದೆ ಇದ್ದ ಆರೋಪಿಯನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಗೊಂಡಿಯಾ ಮೂಲದ ಜಗದೀಶ್ ಉಯ್ಕೆ (35) ಎಂದು ಗುರುತಿಸಲಾಗಿದೆ. ಆತ ವಿಮಾನಗಳಿಗೆ ಬಾಂಬ್‌ ಬೆದರಿಕೆ ಪ್ರಕರಣ ಹಿಂದೆ ಇದ್ದಾನೆ. ಆತ ಹಿಂದೆ ಭಯೋತ್ಪಾದನೆಯ ಬಗ್ಗೆ ಪುಸ್ತಕ ಬರೆದಿದ್ದ. ಅಲ್ಲದೇ 2021 ರಲ್ಲಿ ಪ್ರಕರಣ ಒಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಇಮೇಲ್‌ಗಳು ಪತ್ತೆಯಾದ ನಂತರ ಅವನನ್ನು ಗುರುತಿಸಲಾಗಿದೆ. ತನಿಖೆ ಬಳಿಕ ಇಮೇಲ್‌ಗಳಿಗೆ ಇಂಗ್ಲೆಂಡ್‌ನ ಲಿಂಕ್ ಮಾಡುವ ಮಾಹಿತಿ ಲಭ್ಯವಾಗಿತ್ತು. ಆತ ಪ್ರಧಾನ ಮಂತ್ರಿಗಳ ಕಚೇರಿ (PMO), ರೈಲ್ವೆ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ವಿಮಾನಯಾನ ಕಚೇರಿಗಳು, ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಇಮೇಲ್‌ ಕಳುಹಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಭಾರತದ ವಿಮಾನಯಾನ ಉದ್ಯಮಕ್ಕೆ ಪ್ರಕ್ಷುಬ್ಧತೆ ತರುವಂತೆ ಅ.13ರ ವರೆಗೆ ಭಾರತದಿಂದ ಕಾರ್ಯ ನಿರ್ವಹಿಸುವ 300 ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆಗಳು ಬಂದಿವೆ.

ಅಕ್ಟೋಬರ್ 22 ರಂದು ಇಂಡಿಗೋ ಮತ್ತು ಏರ್ ಇಂಡಿಯಾದ ತಲಾ 13 ವಿಮಾನಗಳು ಸೇರಿದಂತೆ ಸುಮಾರು 50 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು.

ಅ.26 ರಂದು, ಕೇಂದ್ರ ಸರ್ಕಾರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನಿಬಂಧನೆಗಳನ್ನು ಅನುಸರಿಸಲು ಸೂಚಿಸಿತ್ತು. ಬಾಂಬ್ ಬೆದರಿಕೆ ಪೋಸ್ಟ್‌ಗಳನ್ನು ತೆಗೆದುಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿತ್ತು.

Share This Article