ಮಲೆನಾಡಿನ ತಪ್ಪಲಿನಲ್ಲಿರುವ ಸಾಗರದ (Sagar) ಶ್ರೀ ಕ್ಷೇತ್ರ ವರದಹಳ್ಳಿಯಲ್ಲಿ (Varadahalli) ನೆಲೆಸಿರುವ ಶ್ರೀಧರರ ಮಹಿಮೆ ಅಪಾರವಾದದ್ದು. ಅವರನ್ನು ನಂಬಿ ಬಂದವರಿಗೆ ಯಾವುದರಲ್ಲೂ ಸೋಲಿಲ್ಲ ಎಂಬುದು ಭಕ್ತರ ಮಾತು. ಹೀಗೆ ಒಮ್ಮೆ ಸಂಕಷ್ಟ ಪರಿಹಾರಕ್ಕಾಗಿ ಬಂದ ಬಡ ಕುಟುಂಬದವರಿಗಾಗಿ ʻಸುಬ್ರಹ್ಮಣ್ಯʼ ಸ್ವಾಮಿಯ ಕ್ಷೇತ್ರವನ್ನೇ ಸೃಷ್ಟಿ ಮಾಡಿದವರು ಅವರು.

ಹೌದು.. ಒಂದು ಬಡ ಕುಟುಂಬ ಶ್ರೀಧರರಲ್ಲಿ (Sridharaswamy) ಬಂದು ನಮಗೆ ನಾಗ ದೋಷವಿದೆ. ಇದು ಪರಿಹಾರ ಆಗಬೇಕಾದರೆ ಕುಕ್ಕೆಗೆ ಹೋಗಬೇಕು. ಆದರೆ ನಮ್ಮ ಬಡತನದ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ. ಅದು ಸಾಧ್ಯವಾಗದ ಕಾರಣ ನಮ್ಮ ಕುಟುಂಬಕ್ಕೆ ನೆಮ್ಮದಿ ಇಲ್ಲದಂತಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದೇ ಕಾರಣಕ್ಕೆ, ಶ್ರೀ ಸುಬ್ರಹ್ಮಣ್ಯನನ್ನು ತಾವಿದ್ದಲ್ಲಿಯೇ (ವರದಹಳ್ಳಿಯಲ್ಲಿ) ಪ್ರತಿಷ್ಠಾಪಿಸಿ, ಇಲ್ಲೇ ಪೂಜೆ ಮಾಡಿ, ನಿಮ್ಮ ದೋಷ ಪರಿಹಾರ ಆಗುತ್ತದೆ ಎಂದು ಆಶೀರ್ವಾದ ಮಾಡಿದರು. ಇದಾದ ಬಳಿಕ ಆ ಕುಟುಂಬ ಅಲ್ಲಿ ಪೂಜೆ ಮಾಡಿ, ತಮ್ಮ ದೋಷದಿಂದ ಮುಕ್ತವಾಯ್ತು. (ಪ್ರತಿಷ್ಠಾಪಿಸುವಾಗ ಕುಕ್ಕೆಗೆ ಬಂದ ಭಕ್ತರಿಗೆ ಹೇಗೆ ಸಮಸ್ಯೆ ಪರಿಹಾರ ಆಗುತ್ತದೆಯೋ ಹಾಗೆ ಇಲ್ಲಿಯೂ ಆಗಬೇಕು ಎಂದು ಸುಬ್ರಹ್ಮಣ್ಯ ಸ್ವಾಮಿಯ ಬಳಿ ಶ್ರೀಧರ ಸ್ವಾಮಿಗಳು ಪ್ರಾರ್ಥಿಸಿದ್ದರು.)

ಹೀಗೆ ಸಾಕಷ್ಟು ಜನ ತಮ್ಮ ಸಂಕಷ್ಟಗಳನ್ನು ಇಲ್ಲಿ ಬಗೆಹರಿಸಿಕೊಂಡಿದ್ದಾರೆ. ಇಂದಿಗೂ ಸಹ ಬಗೆಹರಿಸಿಕೊಳ್ಳುತ್ತಿದ್ದಾರೆ.
ಇಲ್ಲಿ ಪ್ರತಿ ಷಷ್ಠಿಯಲ್ಲಿ ಪೂಜೆ ನಡೆಯುತ್ತದೆ. ವರ್ಷದಲ್ಲಿ 24 ಪೂಜೆಗಳು ನಡೆಯುತ್ತವೆ. ನಾಗರಪಂಚಮಿ ಹಾಗೂ ಚಂಪಾ ಷಷ್ಠಿಯಲ್ಲಿ ಈ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಆಗ ಊರಿನ ಗ್ರಾಮಸ್ಥರು ಅಪಾರ ಸಂಖ್ಯೆಯ ಭಕ್ತರು ಇಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.

ಇಲ್ಲಿಗೆ ಹೋಗೋದು ಹೇಗೆ?
ಸಾಗರದಿಂದ (ಶಿವಮೊಗ್ಗ ಜಿಲ್ಲೆ) ಸುಮಾರು 10 ಕಿಮೀ ದೂರದಲ್ಲಿ ಈ ಕ್ಷೇತ್ರವಿದೆ. ಸಾಗರದಿಂದ – ವರದಹಳ್ಳಿಗೆ ತೆರಳಬೇಕು. ಅಲ್ಲಿನ ಶ್ರೀಧರಾಶ್ರಮ ಹಾಗೂ ಶ್ರೀರಾಮ ದುರ್ಗಾಂಬ ದೇವಾಲಯದ ಸಮೀಪವೇ ಈ ಕ್ಷೇತ್ರವಿದೆ. ಸಾಗರದಿಂದ ಇಲ್ಲಿಗೆ ತಲುಪಲು ಬಸ್ ಹಾಗೂ ವಾಹನ ಸೌಲಭ್ಯವಿದೆ.
ಶ್ರೀಧರರ ಬಗ್ಗೆ
ಶ್ರೀಧರರು ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಯ ದೇಗಲೂರಿನಲ್ಲಿ ಜನಿಸಿದರು. ಶ್ರೀ ದತ್ತನ ಸಾಕ್ಷಾತ್ಕಾರದಿಂದ ಇವರ ಜನನವಾಗಿತ್ತು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗ, ಪುಣೆಯ ಅನಾಥ ವಿದ್ಯಾರ್ಥಿ ಗೃಹ ಹಾಗೂ ಭಾವೆ ವಿದ್ಯಾಲಯದಲ್ಲಿಯೂ ನಡೆಯಿತು. ಇದರ ನಡುವೆ ಅವರಿಗೆ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿಯು ಹೆಚ್ಚುತ್ತಲ್ಲಿತ್ತು. ಇದರಿಂದ ತಪಸ್ಸಿಗಾಗಿ ಶ್ರೀ ಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಶ್ರೀ ಸಮರ್ಥರ ಪ್ರತ್ಯಕ್ಷ ದರ್ಶನವಾಗಿ ಶ್ರೀಧರರಿಗೆ ʻಭಗವಾನ್’ ಎಂಬ ನಾಮವನ್ನು ನೀಡಿ, ಧರ್ಮ ಜಾಗೃತಿಗಾಗಿ ದಕ್ಷಿಣಕ್ಕೆ ತೆರಳುವಂತೆ ಅಪ್ಪಣೆಯನ್ನು ಇತ್ತರು.
ಅದರಂತೆ ಅಲ್ಲಿಂದ ಹೊರಟ ಭಗವಾನ್ ಶ್ರೀಧರರು ಗೋಕರ್ಣ, ಸಿರಸಿ, ಶೀಗೆಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಜೊತೆ ಕೆಲಕಾಲವಿದ್ದು ನಂತರ ಸಾಗರ ಕೊಡಚಾದ್ರಿ ಇತ್ಯಾದಿ ಕರ್ನಾಟಕದ ಹಲವು ಭಾಗಗಳನ್ನು ಸಂಚರಿಸಿದರು. ಭಾರತಾದ್ಯಂತ ಸಂಚರಿಸಿ ಅಲ್ಲಲಿಯ ದೇವಸ್ಥಾನ ಗುಡಿಗಳ ಜೇಣೋರ್ಣೋದ್ಧಾರ ಮಾಡಿದರು.
ಈ ರೀತಿ ಧರ್ಮ ಜಾಗೃತಿಯನ್ನು ಮಾಡುತ್ತಾ ಮಾಡುತ್ತಾ ಶ್ರೀಗಳ ಮನಸ್ಸಿನಲ್ಲಿ ಕೆಲವು ಕಾಲ ಏಕಾಂತ ಮಾಡಬೇಕೆಂಬ ಇಚ್ಛೆಯಿಂದ ವರದಪುರದಲ್ಲಿ ನೆಲೆಸಿದರು. ತಮ್ಮ ಇಚ್ಛೆಯಂತೆ 19-4-73 ಬೆಳಗ್ಗೆ ಶ್ರೀಗಳು ಧ್ಯಾನಸ್ಥರಾಗಿ ಭೌತಿಕ ಶರೀರವನ್ನು ಬಿಟ್ಟು ತಮ್ಮ ಸಚ್ಚಿದಾನಂದ ಸ್ವರೂಪದಲ್ಲಿ ಲೀನವಾದರು.