‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

Public TV
2 Min Read

ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ನಾಗರ ಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ. ಈ ವಿಶೇಷ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ನಾಗಪಂಚಮಿಯ (Nagapanchami) ಬಗ್ಗೆ ಪುರಾಣಗಳಲ್ಲಿ ಹಲವು ರೀತಿಯ ಕಥೆಗಳಿವೆ. ಇದನ್ನೂ ಓದಿ:ವಿನಯ್ ರಾಜ್‌ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಜೇನು ಕುರುಬ ಸಾಂಗ್ ರಿಲೀಸ್

ಹೀಗಿರುವಾಗ ನಾಗದೇವತೆ (Nagadevathe) ಹಾಗೂ ನಾಗರಹಾವಿನ ಮಹತ್ವಗಳನ್ನು ಸಾರುವ ಅನೇಕ ಚಲನಚಿತ್ರಗಳು ಬಂದಿದೆ. ಕನ್ನಡದಲ್ಲೂ ನಾಗರ ಮಹಿಮೆ ಸಾರುವ ನಾಗ ದೇವರ ಹೆಸರಿನಲ್ಲಿ ಹಲವು ಚಿತ್ರಗಳು (Movies) ಬಂದಿದೆ. ಇದರ ಕುರಿತು ವಿಶೇಷ ಮಾಹಿತಿ ಇಲ್ಲಿದೆ.

1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ಬಾರಿಗೆ ನಿರ್ದೇಶಿಸಿದ ಚಿತ್ರವಾಗಿದೆ. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಅನೇಕರು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ.

1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’ ಸಿನಿಮಾ. ಟೈಗರ್ ಪ್ರಭಾಕರ್, ನಿಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

1991ರಲ್ಲಿ ಬಂದಿದ್ದ ‘ನಾಗಿಣಿ’ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಶ್ರೀಪ್ರಿಯ ನಿರ್ದೇಶನದ ಈ ಚಿತ್ರ ಸೇಡಿನ ಕಥೆಯಾಗಿತ್ತು. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು.

1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನು ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆ.ಎಸ್ ಆರ್ ದಾಸ್ ಈ ಚಿತ್ರ ನಿರ್ದೇಶನ ಮಾಡಿದ್ದರು.

ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ‘ಖೈದಿ’ ಸಿನಿಮಾದ ಹಾಡೊಂದು ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ `ತಾಳೆ ಹೂವು ಎದೆಯಿಂದ’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ.

ಗಿರೀಶ್ ಕಾರ್ನಾಡ್ ನಾಟಕ ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾವಿನ ಪಾತ್ರ ಮಾಡಿದ್ದರು. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.

ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಚಿತ್ರಗಳು ಹೆಚ್ಚಿವೆ. ರುದ್ರನಾಗ, ನಾಗರಹೊಳೆ, ನಾಗಕಾಳಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿದೆ.

Share This Article