ನೆಫ್ರೋ ಯೂರೋಲಜಿ ಸಂಸ್ಥೆಗೆ ರಾಷ್ಟ್ರೀಯ ಮಾನ್ಯತೆ; ಸೇವೆ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಮೂತ್ರಪಿಂಡ ಮತ್ತು ಮೂತ್ರಾಂಗ ಸಂಬಂಧಿತ ರೋಗಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ನೆಫ್ರೋ ಯೂರೋಲಜಿ ಸಂಸ್ಥೆಯು (Nephro Urology Institute) ಪ್ರತಿಷ್ಠಿತ ರಾಷ್ಟ್ರೀಯ ಹಾಸ್ಪಿಟಲ್ ಅಕ್ರೆಡಿಟೇಶನ್ ಮಂಡಳಿ (NABH) ಮಾನ್ಯತೆ ಪತ್ರವನ್ನು ಪಡೆದುಕೊಂಡಿದೆ.

ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ನೆಫ್ರೋ-ಯುರಾಲಜಿ ಸಂಸ್ಥೆ 160 ಹಾಸಿಗೆ ಸಾಮರ್ಥ್ಯದೊಂದಿಗೆ 2007ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಸಂಸ್ಥೆಯ ಘಟಕವನ್ನು ಸ್ಥಾಪಿಸಿ ಸೇವೆಯನ್ನು ನೀಡುತ್ತಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಬಾಂಬ್ – ಡಿಸೆಂಬರ್‌ ಒಳಗಡೆ ಬಿಡುಗಡೆಗೆ ಆಗ್ರಹ

ಈ ಸಂಸ್ಥೆ ದೇಶದ ಅಗ್ರ 10 ವಿಶೇಷ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೀಗ ಸಂಸ್ಥೆಯು ಸುರಕ್ಷತೆ ಮತ್ತು ಅತ್ಯುತ್ತಮ ವೈದ್ಯಕೀಯ ಗುಣಮಟ್ಟಕ್ಕೆ ಎನ್ಎಬಿಎಚ್‌ ನೀಡುವ ಪ್ರಮಾಣ ಪತ್ರ ಪಡೆದುಕೊಂಡಿರುವುದು ಸಂಸ್ಥೆಯ ಗುಣಮಟ್ಟದ ಸೇವೆಗೆ ದೊರೆತಿರುವ ರಾಷ್ಟ್ರೀಯ ಮಾನ್ಯತೆಯಾಗಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಥೆಗೆ ದೊರೆತಿರುವ ಪ್ರಮಾಣ ಪತ್ರವನ್ನು ತಮ್ಮ ಗೃಹ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೆಫ್ರೋ ಯೂರೋಲಜಿ ಸಂಸ್ಥೆಯ ನಿರ್ದೇಶಕ ಆರ್.ಎಂ. ಶಿವಲಿಂಗಯ್ಯ, ಸ್ಥಾಪಕ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್ ಮತ್ತಿತರ ಗಣ್ಯರು ಹಾಜರಿದ್ದರು. ಇದನ್ನೂ ಓದಿ: ಇನ್ಫೋಸಿಸ್‌ನವ್ರು ಏನ್ ಬಹಳ ಬೃಹಸ್ಪತಿಗಳಾ?: ಜಾತಿಗಣತಿಯಲ್ಲಿ ಭಾಗವಹಿಸದ್ದಕ್ಕೆ ಸಿಎಂ ಟಾಂಗ್

ಈ ಸಂದರ್ಭದಲ್ಲಿ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಅವರು, ಗುಣಮಟ್ಟದ ಆರೋಗ್ಯ ಸೇವೆಯನ್ನು ಪ್ರತಿಯೊಬ್ಬರಿಗೂ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ನೆಫ್ರೋ ಯುರಾಲಜಿಯಂತಹ ಸಂಸ್ಥೆಗಳು ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಇಂತಹ ರಾಷ್ಟ್ರೀಯ ಮನ್ನಣೆಯ ಸಂಸ್ಥೆಗಳಲ್ಲಿ ಬಡ ಜನರು ಸಹ ಮೂತ್ರಾಂಗ ಚಿಕಿತ್ಸೆಯ ಅತ್ಯುನ್ನತ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಈ ಸಂಸ್ಥೆಯಲ್ಲಿ ಕಡು ಬಡವ/ನಿರ್ಗತಿಕ/ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

Share This Article