ಬೆಂಗಳೂರು: ಆಡುಗೋಡಿಯ ಚಂದ್ರಪ್ಪನಗರದ ಗ್ರಾನೈಟ್ಸ್ ಅಂಗಡಿಗಳ ರಾಸಾಯನಿಕ ಸ್ಪೋಟಕ್ಕೆ ಮಿಥೈಲ್ ಎಥಿಲೀನ್ ಕೆಟೋನ್ ಪೆರಾಕ್ಸೈಡ್(ಎಂಇಕೆಪಿ) ರಾಸಾಯನಿಕ ಕಾರಣ ಎನ್ನುವುದು ಪತ್ತೆಯಾಗಿದೆ.
ಮಿಥೈಲ್ ಎಥಿಲೀನ್ ಕೆಟೋನ್ ಪೆರಾಕ್ಸೈಡ್ ರಾಸಾಯನಿಕ ವಸ್ತುವನ್ನು ವೈಜ್ಞಾನಿಕವಾಗಿ ನಿಷ್ಕ್ರಿಯಗೊಳಿಸಿರಲಿಲ್ಲ. ಸೂಕ್ತ ರೀತಿಯಲ್ಲಿ ನಿಷ್ಕ್ರಿಯ ಗೊಳಿಸದ ಕಾರಣ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ 70 ವರ್ಷದ ವೃದ್ಧ ನರಸಿಂಹಯ್ಯ ಗಾಯಗೊಂಡಿದ್ದರು. ಸೂರ್ಯನ ಶಾಖದಿಂದ ಈ ರಾಸಾಯನಿಕ ವಸ್ತು ಬಿಸಿಯಾಗಿತ್ತು ಆಗಲೇ ನರಸಿಂಹಯ್ಯ ಈ ಸ್ಪೋಟಕವನ್ನು ತುಳಿದಿದ್ದರು. ಪರಿಣಾಮ ನರಸಿಂಹಯ್ಯನವರ ಪಾದ ಸಂಪೂರ್ಣ ಛಿದ್ರ ಛಿದ್ರವಾಗಿತ್ತು.
ಇದೀಗ ನರಸಿಂಹಯ್ಯ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಪ್ಪನಗರದ ಬನ್ನೇರುಘಟ್ಟ ರಸ್ತೆಯಲ್ಲಿ ನೂರಾರು ಗ್ರಾನೈಟ್ ಮಾರಾಟದ ಅಂಗಡಿಗಳಿವೆ. ಗ್ರಾನೈಟ್ ನ ಪಾಲೀಶ್ ಮಾಡಲು ಎಂಇಕೆಪಿ ಬಳಸಲಾಗುತ್ತದೆ. ಗ್ರಾನೈಟ್ ಅಂಗಡಿಯವರು ಬೇಜವಾಬ್ದಾರಿ ತೋರಿ ರಾಸಾಯನಿಕ ವಸ್ತುವನ್ನು ನಿಷ್ಕ್ರಿಯಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಾರೆ. ಹೀಗಾಗಿ ಸ್ಫೋಟ ಸಂಭವಿಸುತ್ತವೆ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿ ಹೇಳಿಕೆ ಹಿನ್ನಲೆ ಗ್ರಾನೈಟ್ ಅಂಗಡಿ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಾಗಿದೆ. ಆಡುಗೋಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ.