ಇತಿಹಾಸದಲ್ಲಿ ಹೇಗಿದೆ ಹಾಗೆಯೇ ಮಕ್ಕಳಿಗೆ ಕಲಿಸಲಿ: ಯದುವೀರ್ ಒಡೆಯರ್

Public TV
2 Min Read

ಮೈಸೂರು: ಟಿಪ್ಪು ಸುಲ್ತಾನ್ ಬಗ್ಗೆ ಇತಿಹಾಸದಲ್ಲಿ ಹೇಗಿದೆ ಹಾಗೆಯೇ ಮಕ್ಕಳಿಗೆ ಕಲಿಸಲಿ ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಯದುವೀರ್ ಒಡೆಯರ್ ಅವರು, ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕುವುದು ಸರ್ಕಾರದ ನಿರ್ಧಾರ. ಈ ಬಗ್ಗೆ ನನ್ನದೇನೂ ಅಭಿಪ್ರಾಯವಿಲ್ಲ. ಇತಿಹಾಸದಲ್ಲಿ ಇರುವಂತೆ ಮಕ್ಕಳಿಗೆ ಕಲಿಸಬೇಕು ಅಷ್ಟೇ. ಅದನ್ನು ಯಾರು ಬದಲಾಯಿಸಬಾರದು. ಸರ್ಕಾರದ ಈ ನಿರ್ಧಾರದ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಬೇಕಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಪೀಳಿಗೆಯವರು ಟಿಪ್ಪುವನ್ನು ಓದಲಿ- ಶೋಭಾ

ಯಾರು ಶಿಕ್ಷಣ ಹಾಗೂ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಅರಿವು ಹೊಂದಿದ್ದಾರೋ ಅವರ ಅಭಿಪ್ರಾಯ ಪಡೆದುಕೊಳ್ಳಲಿ. ಆದರೆ ಇತಿಹಾಸ ತಿರುಚುವ ಕೆಲಸ ಆಗಬಾರದು. ಟಿಪ್ಪು ಸುಲ್ತಾನ್ ವಿಚಾರದಲ್ಲಿ ಏನು ನಿರ್ಧಾರ ಕೈಗೊಳ್ಳಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಮುಂದಿನ ಪೀಳಿಗೆಗೆ ಟಿಪ್ಪುವಿನ ಮೋಸದ ಇತಿಹಾಸ ಹೇಳಿಕೊಡಬಾರದು – ಪ್ರತಾಪ್ ಸಿಂಹ

ಟಿಪ್ಪು ಸುಲ್ತಾನ್ ಜಯಂತಿಗೆ ದಿನಗಣನೆ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಬಳಿಕ ಟಿಪ್ಪು ಜಯಂತಿಯನ್ನು ಸರ್ಕಾರಿ ಕಚೇರಿಯಲ್ಲಿ ಆಚರಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಈಗ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ವಿಷಯವನ್ನು ಕೈಬಿಡಲು ನಿರ್ಧಾರಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಧ್ಯಮಗಳು ಟಿಪ್ಪು ಜಯಂತಿ ಬಗ್ಗೆ ಪ್ರಶ್ನೆ ಕೇಳಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಸಿಎಂ, ಸರ್ಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆಯಲಾಗುತ್ತಾ ಎನ್ನುವ ಪ್ರಶ್ನೆಗೆ, ಶಾಲಾ ಪುಸ್ತಕಗಳಲ್ಲಿನ ಟಿಪ್ಪು ಕುರಿತ ಪಠ್ಯಗಳನ್ನು ತೆಗೆಯಲು ಚರ್ಚಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಯಾವುದೇ ವಿಚಾರ ಪಠ್ಯ ಪುಸ್ತಕಗಳಲ್ಲಿ ಇರಬಾರದು. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಈ ಕುರಿತು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *